ಮಡಿಕೇರಿ, ಜ. 21: ಜಿಲ್ಲಾ ಕೇಂದ್ರ ಮಡಿಕೇರಿಯ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಸಮುಚ್ಚಯ ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡಿದ್ದಾತನೇ ಗುತ್ತಿಗೆದಾರರಿಗೆ ಕೋಟಿಗಟ್ಟಲೆ ಹಣ ವಂಚಿಸಿ, ಲೆಕ್ಕ ಪತ್ರ ನೀಡದೆ ಸತಾಯಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ಗುತ್ತಿಗೆ ಪಡೆದುಕೊಂಡಿರುವ ನಿವೃತ್ತ ಸೇನಾಧಿಕಾರಿ ಪೊಲೀಸ್ ದೂರು ನೀಡಿದ್ದು, ವಿಚಾರಣೆ ನಡೆಯುತ್ತಿದೆ.ಮಡಿಕೇರಿ ನಗರಸಭಾ ವ್ಯಾಪ್ತಿಗೊಳಪಡುವ ನಗರದಿಂದ ಅನತಿ ದೂರದಲ್ಲಿರುವ ವಿದ್ಯಾನಗರದಲ್ಲಿ ನ್ಯಾಯಾಲಯ ಸಂಕೀರ್ಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯನ್ನು ಮೂಲತಃ ಹೈದರಾಬಾದಿನವರಾದ ಲೆ.ಕ. ಬೋಪಣ್ಣ ಶಶಿಧರ್ ಎಂಬವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಕಾಮಗಾರಿ ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿದೆ. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ ಶಶಿಧರ್ ಅವರು ಈ ಕಾಮಗಾರಿಯ ಉಸ್ತುವಾರಿಗಾಗಿ ತಮ್ಮ ಸಂಬಂಧಿ ಕೊಪ್ಪಳ ಜಿಲ್ಲೆ ಕುಕ್ಕುನಪಳ್ಳಿ ಗ್ರಾಮದ ಕಿಶೋರ್ ಬಾಬು ಎಂಬವರನ್ನು ವ್ಯವಸ್ಥಾಪಕರನ್ನಾಗಿ ನಿಯೋಜಿಸಿದ್ದು, ಅವರಿಗೆ ಮಡಿಕೇರಿಯ ಮೈತ್ರಿಹಾಲ್ ಬಳಿ ಮನೆಯೊಂದನ್ನು ನೀಡಿದ್ದಲ್ಲದೆ, ಓಡಾಡಲು ವಾಹನ ಕೂಡ ಕಲ್ಪಿಸಿದ್ದರು. ಕಳೆದ 4 ವರ್ಷಗಳಿಂದ ಕಿಶೋರ್‍ಬಾಬು ಕಟ್ಟಡದ ಕಾಮಗಾರಿ ಹಾಗೂ ಹಣಕಾಸಿನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು.

6 ಕೋಟಿಗೂ ಅಧಿಕ ಹಣ

ಗುತ್ತಿಗೆದಾರರಾದ ಶಶಿಧರ್ ಅವರು ಕಾಮಗಾರಿಗಾಗಿ ಹಣ ವಿನಿಯೋಗಿಸುತ್ತಿದ್ದರು. ಈ ನಡುವೆ ಕಿಶೋರ್‍ಬಾಬು ನಡು - ನಡುವೆ ಕರೆ ಮಾಡುತ್ತಾ ಹಣದ ಇತರ ಖರ್ಚು ವೆಚ್ಚಕ್ಕಾಗಿ ಹಣದ ಬೇಡಿಕೆ ಇಡುತ್ತಿದ್ದ. ನಂಬಿಕೆಯಿಂದ ಶಶಿಧರ್ ಅವರು ಕಿಶೋರ್ ಮಡಿಕೇರಿಯ ಆ್ಯಕ್ಸಿಸ್ ಬ್ಯಾಂಕ್‍ನಲ್ಲಿ ಹೊಂದಿರುವ ಆತನ ಖಾತೆಗೆ ಹಣ ಕಳುಹಿಸಿದ್ದಾರೆ. ಹೀಗೆ ಕಳುಹಿಸಿದ ಹಣ ರೂ. 6 ಕೋಟಿಯನ್ನು ದಾಟಿದೆ. ಇದಲ್ಲದೆ, ನಗದು ರೂಪದಲ್ಲಿ ರೂ. 40ಲಕ್ಷದಷ್ಟು ಕೈಗೆ ನೀಡಿದ್ದಾರೆ.

ಬರಬರುತ್ತಾ ಕಿಶೋರ್‍ಬಾಬು ಕೆಲಸದಲ್ಲಿ ಅಸಡ್ಡೆ ತೋರುವದು ಹಾಗೂ ಕಾಮಗಾರಿ ಸ್ಥಳಕ್ಕೆ ಹೋಗದೆ ಇರುವದನ್ನು ಗಮನಿಸಿದ ಶಶಿಧರ್ ಅವರು ಕಾಮಗಾರಿಗೆ ಹಣ ಬಳಕೆ ಮಾಡಿದ ಬಗ್ಗೆ ಲೆಕ್ಕ ಪತ್ರ ಕೇಳಿದ್ದಾರೆ. ಕೊಡುವದಾಗಿ ಹೇಳುತ್ತಾ ಬರುತ್ತಿದ್ದ ಕಿಶೋರ್ ನಂತರದಲ್ಲಿ ಶಶಿಧರ್ ಅವರ ಕರೆ ಸ್ವೀಕರಿಸುವದನ್ನು ನಿಲ್ಲಿಸಿದ್ದಾರೆ. ಅಲ್ಲದೆ, ಕಳೆದ ವರ್ಷ ಮಾ. 31 ರಂದು ಕರೆ ಮಾಡಿ ತಾನು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದು, ಒಂದು ತಿಂಗಳೊಳಗಡೆ ಲೆಕ್ಕಪತ್ರ ನೀಡುವದಾಗಿ ಹೇಳಿದ್ದಾನೆ.

ಗುತ್ತಿಗೆ ಕೆಲಸ : ಕಿಶೋರ್ ಬಿಟ್ಟ ನಂತರ ಶಶಿಧರ್ ಅವರೇ ಮಡಿಕೇರಿಯಲ್ಲಿ ಬಾಡಿಗೆ ಮನೆ ಪಡೆದು ತಾವೇ ಕೆಲಸದ ಉಸ್ತುವಾರಿ ನೋಡಿಕೊಳ್ಳಲು ತೊಡಗಿದರು. ಈ ಸಂದರ್ಭದಲ್ಲಿ ಕಾಮಗಾರಿ ಸ್ಥಳಕ್ಕೆ ಸರಿಯಾಗಿ ಸಾಮಗ್ರಿಗಳು ಬರುತ್ತಿರಲಿಲ್ಲ ಎಂಬ ವಿಷಯ ತಿಳಿದು ಬಂದಿದೆ. ಆದರೆ ಕಿಶೋರ್ ಸಾಮಗ್ರಿಗಳು ಬಂದಿರುವದಾಗಿ ದಾಖಲೆ ನಿರ್ಮಿಸಿ ಶಶಿಧರ್ ಅವರನ್ನು ವಂಚಿಸಿರುವದೂ ತಿಳಿದು ಬಂದಿದೆ. ನಂತರ ಇತ್ತೀಚೆಗೆ ಶಶಿಧರ್ ಅವರು ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲೆಂದು ಲೋಕೋಪಯೋಗಿ ಇಲಾಖಾ ಮುಖ್ಯ ಅಭಿಯಂತರರನ್ನು ಭೇಟಿ ಮಾಡಲೆಂದು ತೆರಳಿದ್ದ ಸಂದರ್ಭ ಕಿಶೋರ್ ಕೂಡ ಅವರ ಕಚೇರಿಯಲ್ಲಿದ್ದು, ಇಲ್ಲಿಯೇ ಲೋಕೋಪಯೋಗಿ ಗುತ್ತಿಗೆದಾರನಾಗಿ ಸರಕಾರಿ ಕೆಲಸಗಳನ್ನು ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ. ತಿಂಗಳಿಗೆ 15 ಸಾವಿರ ಸಂಬಳ ಪಡೆಯುತ್ತಿದ್ದ ಈತ ಗುತ್ತಿಗೆದಾರನಾದದ್ದು ಹೇಗೆ, ಮುಂಗಡ ಪಾವತಿಗೆ ಹಣ ಎಲ್ಲಿಂದ ಎಂಬ ಬಗ್ಗೆ ಅನುಮಾನಗೊಂಡ ಶಶಿಧರ್ ಅವರು ಬ್ಯಾಂಕ್‍ಗೆ ತೆರಳಿ ವಿಚಾರಿಸಿದ್ದಾರೆ.

ಸಂಬಂಧಿಕರಿಗೆ ಹಣ

ಬ್ಯಾಂಕ್‍ಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದಾಗ ಶಶಿಧರ್ ಕಳುಹಿಸಿಕೊಟ್ಟ ಹಣವನ್ನು ಈ ರೀತಿಯ ಗುತ್ತಿಗೆ ಕಾಮಗಾರಿಗಳಿಗೆ ಬಳಸಿ ಕೊಂಡಿರುವದು, ಆತನ ಸಂಬಂಧಿಗಳಿಗೆ ಕಳುಹಿಸಿಕೊಟ್ಟಿರುವದು ಪತ್ತೆಯಾಗಿದೆ. ಈ ಎಲ್ಲಾ ದಾಖಲೆಗಳ ಸಹಿತ ಶಶಿಧರ್ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ತೆರಳಿದ್ದು, ವರಿಷ್ಠಾಧಿಕಾರಿಗಳು ದೇಶ ಕಾಯುವ ಸೇನಾಧಿಕಾರಿಗೇ ಈ ರೀತಿಯಾಗಿ ವಂಚಿಸಿರುವದನ್ನು ಗಂಭೀರವಾಗಿ ಪರಿಗಣಿಸಿ ನಗರ ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಅದರಂತೆ ಅಧಿಕಾರಿಗಳು ಮೊಕದ್ದಮೆ ದಾಖಲಿಸಿಕೊಂಡು ಕಿಶೋರ್‍ನನ್ನು ಠಾಣೆಗೆ ಕರೆಸಿ ವಿಚಾರಿಸಿದ್ದಾರೆ. ಈ ಸಂದರ್ಭ ಮುಂದಿನ 15 ದಿನಗಳೊಳಗೆ ಲೆಕ್ಕಪತ್ರ ನೀಡುವದಾಗಿ ಕಿಶೋರ್‍ಬಾಬು ಒಪ್ಪಿಕೊಂಡಿದ್ದಾನೆ.(ಮೊದಲ ಪುಟದಿಂದ)

ಕಾಮಗಾರಿ ನೀಡಬೇಡಿ

ನ್ಯಾಯಾಲಯ ಕಟ್ಟಡ ಹಣವನ್ನು, ಅದರಲ್ಲೂ ಸಂಬಂಧಿಯೂ ಆಗಿರುವ ಸೇನಾಧಿಕಾರಿಗೆ, ವಂಚಿಸಿರುವ ಕಿಶೋರ್‍ಬಾಬುವಿನಂತಹ ಗುತ್ತಿಗೆದಾರರು ಯಾವ ರೀತಿಯಲ್ಲಿ ಸರಕಾರಿ ಕಟ್ಟಡಗಳ ಕಾಮಗಾರಿ ನಿರ್ವಹಿಸಬಹುದು ಎಂದು ಪ್ರಶ್ನಿಸಿರುವ ಶಶಿಧರ್ ಅವರು, ಯಾವದೇ ಕಾರಣಕ್ಕೂ ಆತನಿಗೆ ಜಿಲ್ಲೆಯಲ್ಲಿ ಕಾಮಗಾರಿ ಗುತ್ತಿಗೆ ನೀಡಬಾರದು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಇಲಾಖೆಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಲೋಕಕ್ಕೆ ನ್ಯಾಯ ಒದಗಿಸುವ ನ್ಯಾಯಾಲಯ ಕಟ್ಟಡದಲ್ಲಿಯೇ ಈ ರೀತಿ ವಂಚನೆ ಆಗಿರುವಾಗ ಇನ್ನೂ ಜಿ.ಪಂ. ಕಟ್ಟಡ, ಕೇಂದ್ರೀಯ ವಿದ್ಯಾಲಯ, ಕೊಡವ ಹೆರಿಟೇಜ್ ಸೆಂಟರ್ ಮುಂತಾದ ಕಟ್ಟಡಗಳಲ್ಲಿ ಎಷ್ಟು ಕೋಟಿ ಇಲಿ - ಹೆಗ್ಗಣಗಳ ಬಿಲ ಸೇರಿವೆಯೋ? ‘ಬೇಲಿಯೇ ಎದ್ದು ಹೊಲ ಮೇಯ್ದರೆ ಇನ್ನು ಯಾರನ್ನು ನಂಬೋದು’?

- ಕುಡೆಕಲ್ ಸಂತೋಷ್