ಭಾಗಮಂಡಲ, ಜ. 21: ಭಾಗಮಂಡಲ ಹಾಗೂ ತಲಕಾವೇರಿ ಸುತ್ತಮುತ್ತಲಿನ ಕಸ ತ್ಯಾಜ್ಯಗಳನ್ನು ಹೆಕ್ಕಿ ತೆಗೆದ ಈ ಸಂಘಟನೆಯ ಹೆಸರು ಕೊಡಗು ಫಾರ್ ಟುಮಾರೋ. ಜಿಲ್ಲೆಯಿಂದ ಒಟ್ಟು 26 ಟನ್ ಪ್ಲಾಸ್ಟಿಕ್ ಹೆಕ್ಕಿ ಸಾಗಿಸಿದ ಈ ಸಂಘಟನೆಯ ಸದಸ್ಯರು ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವದು ವಿಶೇಷ.
ಜಿಲ್ಲೆಯ ಕೆಲವು ಯುವಕರು ಮತ್ತು ಯುವತಿಯರು ಬೆಂಗಳೂರಿನಲ್ಲಿ ಸಾಫ್ಟ್‍ವೇರ್ ಕಂಪೆನಿಗಳಲ್ಲಿ ಉದ್ಯೋಗದಲ್ಲಿದ್ದಾರೆ. ವಿವಿಧ ಹುದ್ದೆಯಲ್ಲಿರುವ ಮಂದಿ ಒಟ್ಟುಗೂಡಿ ಪೊನ್ನೋಲತಂಡ ಕಾವೇರಪ್ಪ ನೇತೃತ್ವದಲ್ಲಿ ಸ್ಥಾಪಿಸಿದ ಸಮಾನ ಮನಸ್ಕರ ವಾಟ್ಸಪ್ ಗ್ರೂಪ್ ಒಂದು ಬೃಹತ್ತಾದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಗ್ರೂಪಿನಲ್ಲಿ ಬರೋಬ್ಬರಿ 270 ಮಂದಿ ಯುವಕ ಯುವತಿಯರು, ವಯಸ್ಕರು ಮಕ್ಕಳು ಇದ್ದಾರೆ. ಎಲ್ಲ ರೀತಿಯ ಮಂದಿ ಜಾತಿ ಬೇಧವಿಲ್ಲದೆ ಪಾಲ್ಗೊಂಡಿದ್ದಾರೆ.
ಇದೀಗ ಭಾಗಮಂಡಲ ಹಾಗೂ ತಲಕಾವೇರಿ ಸುತ್ತಮುತ್ತಲಿನ ಕಸ ತ್ಯಾಜ್ಯಗಳನ್ನು ಹೆಕ್ಕಿ ತೆಗೆದ ಸಂಘಟನೆ ಜಿಲ್ಲೆಯಿಂದ ಒಟ್ಟು 26 ಟನ್ ಪ್ಲಾಸ್ಟಿಕ್ ಹೆಕ್ಕಿ ಸಾಗಿಸಿದ್ದಾರೆ. ಒಂದಾದ ನಂತರ ಒಂದರಂತೆ ಸಂಘಟನೆ ತೆರೆಮರೆಯಲ್ಲಿ ಸದ್ದಿಲ್ಲದೆ ತನ್ನ ಸೇವೆಯನ್ನು ಕೊಡಗು ಜಿಲ್ಲೆಗೆ ಮಾಡುತ್ತಾ ಸಾಗಿರುವದು ವಿಶೇಷ. ಯಾವದೇ ಪ್ರಚಾರವನ್ನು ಬಯಸದೆ ತಮ್ಮಷ್ಟಕ್ಕೆ ತಾವೇ ಸಮಾಜಸೇವೆ ಮಾಡುವ ಇವರು ಇಂದಿನ ಯುವಜನಕ್ಕೆ ಮಾದರಿ. ಮಾಧ್ಯಮದ ಮಂದಿ ಸಂಘಟನೆಯ ಕಾರ್ಯವೈಖರಿಯ ಬಗ್ಗೆ ಮಾತನಾಡಿಸಿದರೆ ಸರ್ ನಮಗೆ ಪ್ರಚಾರ ಬೇಡ, ಸೇವೆ ಮುಖ್ಯ ಎಂದು ತಮ್ಮ ಕೆಲಸದಲ್ಲಿ ತಲ್ಲೀನರಾದರು.