ಮಡಿಕೇರಿ, ಜ. 21: ಮಡಿಕೇರಿ ನಗರಕ್ಕೆ ನೀರು ಪೂರೈಕೆ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ತುರ್ತು ಗಮನಹರಿಸಬೇಕಿದೆ ಎಂದು ನಗರಸಭಾ ಹಿರಿಯ ಸದಸ್ಯ ಹಾಗೂ ಮೂಡಾ ಮಾಜಿ ಅಧ್ಯಕ್ಷ ಚುಮ್ಮಿ ದೇವಯ್ಯ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಇದಕ್ಕೆ ಸಂಬಂಧಿಸಿದ ಕೆಲವು ವಾಸ್ತವ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಮಡಿಕೇರಿ ನಗರಕ್ಕೆ ನೀರಿನ ಮೂಲವಾದ ಕೂಟುಹೊಳೆಯಲ್ಲಿ ನೀರಿನ ಮೂಲ ಬತ್ತುತ್ತಿರುವದರಿಂದ ಹಾಗೂ ನಗರದ ಇತರೆ ಬಡಾವಣೆಯಲ್ಲಿಯೂ ಕೂಡ ನೀರಿನ ಮೂಲಗಳು ಬತ್ತುತ್ತಿರುವದರಿಂದ ಮಡಿಕೇರಿ ನಾಗರಿಕರಿಗೆ ಮುಂದಿನ ದಿನಗಳಲ್ಲಿ ನೀರಿನ ಬವಣೆ ಬರುವ ಸಾಧ್ಯತೆಗಳಿರುತ್ತವೆ.
ಕುಂಡಾಮೇಸ್ತ್ರಿ ಜಲಮೂಲದಲ್ಲಿ ನೀರಿಗೆ ಚೆಕ್ಡ್ಯಾಂ ಕಟ್ಟುವ ಕನಸು ಕನಸಾಗಿಯೇ ಉಳಿದಿದ್ದು, ನೀರಿನ ಶೇಖರಣೆಗೆ ವರ್ಷಂಪ್ರತಿ ಸ್ಯಾಂಡ್ಬೆಡ್ ಅಳವಡಿಸಲಾಗುತ್ತಿತ್ತು. ಆದರೆ ಕಳೆದ ವರ್ಷದ ಮಳೆಗೆ ಎಲ್ಲ ಮರಳಿನ ಮೂಟೆಯನ್ನು ಅಡ್ಡಲಾಗಿಟ್ಟು ಅವೆಲ್ಲವೂ ಭಾರೀ ಮಳೆಗೆ ಕೊಚ್ಚಿ ಹೋಗಿವೆ. ಇನ್ನೂ ಕೂಡ ನೀರಿನ ಶೇಖರಣೆಗೆ ಯಾವದೇ ಕ್ರಮ ಕೈಗೊಳ್ಳದಿರುವದು ಮುಂದಿನ ದಿನಗಳಲ್ಲಿ ನೀರಿನ ಸರಬರಾಜಿಗೆ ತೊಂದರೆಯಾಗಲಿದೆ. ಈ ಕೆಲಸವನ್ನು ನಗರ ನೀರು ಸರಬರಾಜು ಮಂಡಳಿ ವತಿಯಿಂದ ಕೈಗೊಳ್ಳಲಾಗಿದ್ದು, (ಕರ್ನಾಟಕ ನೀರು ಮತ್ತು ಒಳಚರಂಡಿ) ನಗರಸಭೆಗೆ ಇನ್ನೂ ಹಸ್ತಾಂತರ ಮಾಡಿರುವದಿಲ್ಲ. ಇದರೊಂದಿಗೆ ಈಗಿನ ಪ್ರಶ್ನೆ ಈ ಕೆಲಸವನ್ನು ಕೈಗೊಳ್ಳುವವರಾರು? ನಗರಸಭೆಯೇ? ಒಳಚರಂಡಿ ಮಂಡಳಿಯೇ ಅಥವಾ ಜಿಲ್ಲಾಡಳಿತವೇ? ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಜಿಲ್ಲಾಡಳಿತ ಪ್ರಕೃತಿ ವಿಕೋಪ ನಿಧಿಯಿಂದ ತುರ್ತಾಗಿ ಈ ಕೆಲಸ ನಿರ್ವಹಿಸಲು ಅಂದಾಜುಪಟ್ಟಿ ಮಾಡಿ ಕೈಗೆತ್ತಿಕೊಳ್ಳುವದು ಸೂಕ್ತ. ನೀರಿನ ಬವಣೆ ಹೆಚ್ಚಾಗುವ ಸಾಧ್ಯತೆ ಇರುವದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಕೆಲಸ ಕೈಗೊಳ್ಳಬೇಕಿದೆ. ಅಂದಾಜು ಪಟ್ಟಿ ಮಾಡುವ ಸಾಧ್ಯತೆ ಇದ್ದು, ಜಿಲ್ಲಾಧಿಕಾರಿಯವರು ಈ ಬಗ್ಗೆ ಪರಿಶೀಲನೆ ನಡೆಸಬೇಕಾಗಿದ್ದು, ತುರ್ತಾಗಿ ಈ ಕೆಲಸ ಕೈಗೊಳ್ಳಬೇಕಾಗಿದೆ ಎಂದು ಚುಮ್ಮಿ ಹೇಳಿದ್ದಾರೆ. ಹಾಗೆಯೇ ನೀರನ್ನು ಸರಬರಾಜು ಮಾಡುವ 300 ಹೆಚ್ಪಿ ಮೋಟಾರು ಕೂಡ ದುರಸ್ತಿಯಾಗಿದ್ದು, ತುರ್ತಾಗಿ ಕೆ.ಯು.ಡಬ್ಲ್ಯು.ಎಸ್.ನವರು ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ ಎಂದೂ ಅವರು ಗಮನ ಸೆಳೆದಿದ್ದಾರೆ.