ಮಡಿಕೇರಿ, ಜ. 21: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವ ಮುಗಿದು ಮೂರು ತಿಂಗಳು ಕಳೆದರೂ ಇನ್ನೂ ಕೂಡ ಸರಕಾರದಿಂದ ಘೋಷಣೆಯಾಗಿದ್ದ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿಲ್ಲ. ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸರಕಾರದಿಂದ ದಸರಾ ಉತ್ಸವಕ್ಕೆ ಅನುದಾನ ಸಿಗುವದೇ ಸಂಶಯ ಎಂಬಂತಹ ಪರಿಸ್ಥಿತಿಯಲ್ಲಿ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಅವರು 50 ಲಕ್ಷ ರೂಪಾಯಿ ಹಣವನ್ನು ಸರಕಾರದಿಂದ ಒದಗಿಸಿಕೊಡುವದಾಗಿ ಹೇಳಿದ್ದರಾದರೂ ಇದುವರೆಗೂ ನಯಾ ಪೈಸೆಯೂ ದಸರಾ ಸಮಿತಿ ಕೈಸೇರಿಲ್ಲ. ಸರಕಾರದ ಅನುದಾನದ ನಿರೀಕ್ಷೆಯೊಂದಿಗೆ ಅಲ್ಲಿ ಇಲ್ಲಿ ಹಣ ಹೊಂದಾಣಿಕೆ ಮಾಡಿಕೊಂಡು ಕಾರ್ಯಕ್ರಮ ನಡೆಸಿದ ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳು ಇದೀಗ ಹಣ ಬಿಡುಗಡೆಯಾಗದ ಕಾರಣದಿಂದಾಗಿ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಪರಿಸ್ಥಿತಿಗೆ ತಲಪಿವೆ.

ಪ್ರಾಕೃತಿಕ ವಿಕೋಪದಿಂದಾಗಿ ಸಾವು-ನೋವು ಸಂಭವಿಸಿದ್ದರಿಂದ ಸರಳವಾಗಿ ದಸರಾ ಆಚರಣೆ ಮಾಡಬೇಕೆಂಬ ತೀರ್ಮಾನದೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕೆಲವೇ ದಿನಗಳಿಗೆ ಸೀಮಿತಗೊಳಿಸಿ, ಮಂಟಪಗಳನ್ನು ಕೂಡ ಮಿತವಾದ ಖರ್ಚಿನೊಂದಿಗೆ ಹೊರಡಿಸಲಾಗಿತ್ತು. ಜಲಪ್ರಳಯದಿಂದಾಗಿ ವ್ಯಾಪಾರ ವಹಿವಾಟು ನೆಲಕಚ್ಚಿದ್ದರಿಂದ ಚಂದಾ ವಸೂಲಿ ಮಾಡಲು ಆಗದಂತಹ ಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಸರಕಾರದಿಂದ ಹಣ ಬರಲಿದೆ ಎಂಬ ಆಶಾಭಾವನೆಯಿಂದ ಕಾರ್ಯಪ್ರವೃತ್ತರಾದ ದಸರಾ ಸಮಿತಿ ಇದೀಗ ಹಣ ಕೈಸೇರಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದೆ.

ಈ ಬಗ್ಗೆ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿರುವ ದಸರಾ ಸಮಿತಿ ಅಧ್ಯಕ್ಷೆಯಾಗಿರುವ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು, ಕೊಡಗು ಪ್ರವಾಸಿ ಉತ್ಸವದ ಸಂದರ್ಭ ಪ್ರವಾಸಿ ಉತ್ಸವದ ಅನುದಾನದೊಂದಿಗೆ ದಸರಾ ಅನುದಾನವನ್ನು ಕೂಡ ಬಿಡುಗಡೆ ಮಾಡುವದಾಗಿ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಭರವಸೆ ನೀಡಿದ್ದರಾದರೂ ಇದುವರೆಗೂ ಹಣ ಬಿಡುಗಡೆಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ತಾನು

(ಮೊದಲ ಪುಟದಿಂದ) ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಂದಿಗೆ ಮಾತ ನಾಡಿದ್ದು, ದಸರಾ ಅನುದಾನದ ಸಂಬಂಧದ ಕಡತದ ಬಗ್ಗೆ ಸಚಿವರ ಗಮನ ಸೆಳೆಯುವಂತೆ ಮನವಿ ಮಾಡಿದ್ದೇನೆ. ದಸರಾ ಖರ್ಚು-ವೆಚ್ಚ ಸಂಬಂಧ ವರದಿ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದು, ಆದಷ್ಟು ಶೀಘ್ರ ಹಣ ಬಿಡುಗಡೆಯಾಗುವ ನಂಬಿಕೆ ಇದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜನಾರ್ಧನ ಅವರು ಪ್ರತಿಕ್ರಿಯಿಸಿ, ಮಡಿಕೇರಿ ದಸರಾ ಉತ್ಸವದ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರ ಸಹಿತ ಸಮಗ್ರ ವರದಿಯೊಂದನ್ನು ನೀಡುವಂತೆ ದಸರಾ ಸಮಿತಿಗೆ ಸೂಚಿಸಲಾಗಿದ್ದು, ವರದಿ ಸಿಕ್ಕ ಬಳಿಕ ಅದನ್ನು ಸರಕಾರಕ್ಕೆ ಕಳುಹಿಸಲಾಗು ವದು ಎಂದು ತಿಳಿಸಿದ್ದಾರೆ.

ದಸರಾ ಸಮಿತಿ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದ ಯಾವದೇ ಪದಾಧಿಕಾರಿಗಳು ಅನುದಾನ ಬಿಡುಗಡೆಗೊಳಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಆದ್ದರಿಂದ ದಶಮಂಟಪ ಸಮಿತಿಗಳು ತೊಂದರೆಗೆ ಸಿಲುಕಿವೆ. ಆದಷ್ಟು ಶೀಘ್ರ ಅನುದಾನ ಒದಗಿಸಿಕೊಡದೇ ಇದ್ದಲ್ಲಿ ದಶಮಂಟಪ ಸಮಿತಿಯ ಸಭೆ ನಡೆಸಿ ಮುಂದಿನ ಹೋರಾಟಕ್ಕೆ ತೀರ್ಮಾನ ಕೈಗೊಳ್ಳಲಾಗುವದು ಎಂದು ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್ ತಿಳಿಸಿದ್ದಾರೆ.