ಮಡಿಕೇರಿ, ಜ. 21: ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಕಷ್ಟಗಳನ್ನು ದಿಟ್ಟತನದಿಂದ ಎದುರಿಸುವ ಮೂಲಕ ನೆಮ್ಮದಿಯ ಬದುಕನ್ನು ಸಂತ್ರಸ್ತ ಕುಟುಂಬಗಳು ಕಂಡುಕೊಳ್ಳಬೇಕೆಂದು, ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾಗಿರುವ ಶ್ರೀ ಬೋಧಸ್ವರೂಪಾನಂದ ಮಹಾರಾಜ್ ಕರೆ ನೀಡಿದರು. ಇಂದು ಮಾದಾಪುರದ ಶ್ರೀ ಸಿದ್ಧಿಬುದ್ಧಿಗಣಪತಿ ದೇವಾಲಯದ ಸಮುದಾಯ ಭವನದಲ್ಲಿ ಹೊಲಿಗೆ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಅಲ್ಲದೆ ತಾ. 22 ರಂದು (ಇಂದು) ಸೂರ್ಲಬ್ಬಿಯಲ್ಲಿ ಜೇನುಕೃಷಿ ತರಬೇತಿಗೆ ಚಾಲನೆ ನೀಡಲಾಗುವದು ಎಂದು ತಿಳಿಸಿದರು.
ಪ್ರಾಕೃತಿಕ ದುರಂತದ ಪರಿಣಾಮ ಅನೇಕರು ಗ್ರಾಮಗಳನ್ನು ತೊರೆದು ಬೇರೆಡೆಗೆ ವಲಸೆ ಹೋಗುವ ಸನ್ನಿವೇಶ ತಡೆಗಟ್ಟುವದರೊಂದಿಗೆ, ಹುಟ್ಟೂರಿನಲ್ಲೇ ಸ್ವಾಭಿಮಾನದ ಬದುಕು ಕಂಡುಕೊಳ್ಳಬೇಕೆಂಬ ಆಶಯದಿಂದ ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿ, ಪುರುಷರಿಗೆ ಜೇನು ಕೃಷಿ ಹಾಗೂ ವಾಹನ ಚಾಲನಾ ತರಬೇತಿ ನೀಡಲು ಆಶ್ರಮದಿಂದ ಸಹಕಾರ ಕಲ್ಪಿಸುತ್ತಿರುವದಾಗಿ ಅವರು ನುಡಿದರು.
ಅಲ್ಲದೆ ಕಡ್ಲೆ ಮಿಠಾಯಿಯಂತಹ ತಿನಿಸುಗಳನ್ನು ಕೂಡ ಹೆಣ್ಣು ಮಕ್ಕಳು ಮನೆಗಳಲ್ಲಿ ತಯಾರಿಸಿ ಮಾರುಕಟ್ಟೆ ವ್ಯವಸ್ಥೆ ಕಂಡುಕೊಳ್ಳುವ ಆಶಯದಿಂದ ಇಂತಹ ತಿಂಡಿಗಳ ತಯಾರಿಕೆಗೂ ಮಠ ಪ್ರೋತ್ಸಾಹಿಸಲು ಉದ್ದೇಶಿಸಿರುವದಾಗಿ ಸ್ವಾಮೀಜಿ ನುಡಿದರು. ಶತಮಾನದ ಹಿಂದೆ ರಾಮಕೃಷ್ಣ ಪರಮಹಂಸರು, ಶಾರದಾಮಾತೆ ಹಾಗೂ ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ಸ್ಥಾಪನೆಗೊಂಡಿರುವ ಸಂಸ್ಥೆ ವಿಶ್ವದೆಲ್ಲೆಡೆ ಆಧ್ಯಾತ್ಮದೊಂದಿಗೆ ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದು, ಕೊಡಗಿನಲ್ಲಿ ಕೂಡ ಇಂತಹ ಕಾರ್ಯಗಳನ್ನು ಅನೇಕ ವರ್ಷಗಳಿಂದ ಕೈಗೊಂಡಿದ್ದು, ಪ್ರಸಕ್ತ ಮಠದ ಸೇವೆಯನ್ನು ಸದುಪಯೋಗಮಾಡಿಕೊಳ್ಳುವಂತೆ ಅವರು ಕರೆ ನೀಡಿದರು.
ಸಬಲರಾಗಲು ಕರೆ : ಇಂದು ವಿಶ್ವದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಕ್ಲಿಷ್ಟ ಸನ್ನಿವೇಶದಲ್ಲೂ ಸಾಧನೆ ತೋರುತ್ತಿದ್ದು, ಸಂತ್ರಸ್ತ ಕುಟುಂಬಗಳ ಮಹಿಳೆಯರು ಎದೆಗುಂದದೆ ರಾಮಕೃಷ್ಣ ಶಾರದಾಶ್ರಮ ಸಹಿತ ದಾನಿಗಳ ಸಹಕಾರದಿಂದ ಜೀವನದಲ್ಲಿ ಸಬಲರಾಗುವತ್ತ ಹೆಜ್ಜೆ ಇರಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು. ಗ್ರಾಮೀಣ ಜನತೆಯ ದೈನಂದಿನ ಬವಣೆಗಳ
(ಮೊದಲ ಪುಟದಿಂದ) ಅರಿವು ತಮಗಿದ್ದು, ಸರಕಾರದಿಂದ ಆದಷ್ಟು ಬೇಗ ಪುನರ್ವಸತಿಯೊಂದಿಗೆ, ನಷ್ಟ ಪರಿಹಾರ ಲಭಿಸದಿದ್ದರೆ ಹೋರಾಟ ಅನಿವಾರ್ಯವೆಂದು ಸುಳಿವು ನೀಡಿದರು. ಹೆಣ್ಣು ಮಕ್ಕಳು ಹೊಲಿಗೆ ಕಸೂತಿಯಿಂದ ಉತ್ತಮ ಜೀವನ ದೊಂದಿಗೆ ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳಲು ವಿಫುಲ ಅವಕಾಶವಿದೆ ಎಂದು ಅವರು ನೆನಪಿಸಿದರು.
ಏಕತೆ ಸಾಧಿಸೋಣ : ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಈ ವೇಳೆ ಮಾತನಾಡುತ್ತಾ, ಪ್ರಕೃತಿ ಮುನಿದಾಗ ಸಂಭವಿಸಿದ ದುರಂತದಲ್ಲಿ ನೊಂದವರು ಮತ್ತು ನೆರವು ಹಸ್ತ ಚಾಚಿದವರು ಯಾವದೇ ಜಾತಿ, ಮತ, ಭಾಷೆಗಳನ್ನು ಲೆಕ್ಕಿಸದೆ ಸ್ಪಂದಿಸಿದ್ದು, ಆ ಮೂಲಕ ನಾವೆಲ್ಲರೂ ಏಕತೆ ಸಾಧಿಸುವಂತಾಗಬೇಕೆಂದು ಆಶಿಸಿ ದರು. ಕಷ್ಟದಲ್ಲಿ ನೆರವಾಗು ವವರು ನಮ್ಮ ಬಂಧುಗಳೆಂದು ಅವರು ನೆನಪಿಸಿದರು.
ನೋವಿನ ಅರಿವಿದೆ: ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ತಾವು ಕೂಡ ಪ್ರಾಕೃತಿಕ ವಿಕೋಪ ದಿಂದ ಸಾಕಷ್ಟು ಹಾನಿ ಅನುಭವಿಸಿದ್ದು, ಸಂತ್ರಸ್ತರ ನೋವಿನ ಅರಿವು ತಮಗೂ ಇದೆ ಎಂದು ಇದೇ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ನುಡಿದರು. ಕೃಷಿ ಭೂಮಿ, ಮನೆ, ಆಸ್ತಿ ಪಾಸ್ತಿ ಹಾನಿಯಿಂದ ತತ್ತರಿಸಿರುವ ಕುಟುಂಬಗಳಿಗೆ ಆದಷ್ಟು ಬೇಗನೆ ಸರಕಾರದಿಂದ ನೆರವು ಲಭಿಸಲೆಂದು ಆಶಿಸಿದ ಅವರು, ನೊಂದವರೊಂದಿಗೆ ಜಿಲ್ಲೆಯ ಜನಪ್ರತಿನಿಧಿಗಳು, ಸರಕಾರ, ಆಡಳಿತ ವ್ಯವಸ್ಥೆ ಸದಾ ನೆರವು ಒದಗಿಸಲು ಶ್ರಮಿಸುವದಾಗಿ ಮಾರ್ನುಡಿದರು. ಆಶ್ರಮದ ನೆರವಿನಿಂದ ಸಂತ್ರಸ್ತ ಕುಟುಂಬಗಳು ತಮ್ಮ ಕಾಲಿನಲ್ಲಿ ನಿಂತು ಬಾಳುವತ್ತ ಸಾಗಬೇಕೆಂದು ಅವರು ತಿಳಿಹೇಳಿದರು.
ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯ ಟಿ.ಪಿ. ಸಂದೇಶ್, ಮಾದಾಪುರ ಗ್ರಾ.ಪಂ. ಸದಸ್ಯರುಗಳಾದ ನಾಪಂಡ ಉಮೇಶ್, ಶಾಂತ, ಇಬ್ರಾಹಿಂ ಸೀದಿ, ಲತೀಫ್, ಲಯನ್ಸ್ ಪ್ರಮುಖ ಅಜಯ್‍ಸೂದ್, ಮಠದ ಭಕ್ತರಾದ ಸುಬೋದ್‍ರಾವ್, ಶಂಕರ್, ಶರತ್ ಹಾಗೂ ಹೊಲಿಗೆ ಕೇಂದ್ರದ ಶಿಕ್ಷಕಿಯರಾದ ರಂಜನಿ, ಸುಗಂಧ, ಶೋಭಾ ಮೊದಲಾದವರು ಪಾಲ್ಗೊಂಡಿದ್ದರು. ಮಠದಿಂದ ಸಂತ್ರಸ್ತರಿಗೆ ಈ ವೇಳೆ ನೆರವು ನೀಡಲಾಯಿತು. ಆಶ್ರಮದ ಬ್ರಹ್ಮಚಾರಿ ದೀಪಂಕರ್ ಮತ್ತಿತರರು ಉಪಸ್ಥಿತರಿದ್ದರು.