ಶ್ರೀಮಂಗಲ, ಜ. 21: ದ.ಕೊಡಗಿನ ಬೆಕ್ಕೆಸೊಡ್ಲೂರು ಗ್ರಾಮದ ರೈತ ಮಲ್ಲಮಾಡ ವಿಷ್ಣ್ಣು ಅವರಿಗೆ ಸೇರಿದ ಹಾಲು ಕರೆಯುವ ಹಸುವನ್ನು ಹುಲಿ ಧಾಳಿ ನಡೆಸಿ ಕೊಂದು ಹಾಕಿರುವದರ ವಿರುದ್ಧ ಹಸುವಿನ ಕಳೆಬರದ ಎದುರು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸಂದರ್ಭ ಅರಣ್ಯ ಇಲಾಖೆಯಿಂದ ನೀಡುವ ರೂ.10 ಸಾವಿರ ಪರಿಹಾರ ಬದಲು ಹಸುವಿನ ಮೌಲ್ಯ ರೂ. 35 ಸಾವಿರ ನೀಡಬೇಕು, ಹುಲಿಯನ್ನು ಕೂಡಲೇ ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಗಂಗಾಧರ್ ಹಾಗೂ ಸಿಬ್ಬಂಧಿಗಳನ್ನು ಸ್ಥಳದಿಂದ ತೆರಳಲು ಬಿಡುವದಿಲ್ಲವೆಂದೂ, ಹಸುವಿನ ಮೌಲ್ಯವನ್ನು (ಮೊದಲ ಪುಟದಿಂದ) ನೀಡಬೇಕು.ಹುಲಿಯನ್ನು ಸೆರೆಹಿಡಿಯಲು ಮೇಲಾಧಿಕಾರಿಗಳಿಂದ ಅನುಮತಿ ಪಡೆದು ಬೋನ್ ಇರಿಸುವಂತೆ ಮತ್ತು ತಕ್ಷಣದಿಂದಲೇ ಕಾರ್ಯಾಚರಣೆ ಕೈಗೊಳ್ಳುವಂತೆ ಒತ್ತಾಯಿಸಿದರು.

ಅಲ್ಲದೆ ಹಾಲು ಕರೆಯುವ ಹಸುವಿನ ಒಂದುವರೆ ತಿಂಗಳ ಕರುವನ್ನು ಸಾಕುವದು ಕಷ್ಟ. ಅದನ್ನು ಅರಣ್ಯ ಇಲಾಖೆ ವಹಿಸಿಕೊಂಡು ಸಾಕುವಂತೆ ಗ್ರಾಮಸ್ಥರು ಕಿಡಿಕಾರಿದರು. ಮೇಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಆರ್.ಎಫ್. ಗಂಗಾಧರ್ ಅವರು ಸರಕಾರದ ನಿಯಮದಂತೆ ರೂ 10 ಸಾವಿರ ಮಾತ್ರ ಪರಿಹಾರ ನೀಡಲು ಸಾಧ್ಯವಿದೆ.ಈ ಹಿಂದಿನ ಹಲವು ಪ್ರಕರಣಗಳಿಗೆ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಗೆ ಬರುವ ಹುಲಿ ಸಂರಕ್ಷಣಾ ನಿಧಿ(ಟೈಗರ್ ಫೌಂಡೇಷನ್) ಯಿಂದ ಹೆಚ್ಚುವರಿ ಹಣ ನೀಡಲಾಗಿತ್ತು. ಆದರೆ ಈ ಬಗ್ಗೆ ಲೆಕ್ಕ ಪರಿಶೋಧನೆಯಲ್ಲಿ ಆಕ್ಷೇಪಣೆ ಬಂದ ಹಿನ್ನಲೆಯಲ್ಲಿ ಈ ಹಣವನ್ನು ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಹಸು ಬಲಿಯಾಗಿರುವ ಸ್ಥಳದಲ್ಲಿ ವಿಚಾರ ಅರಿಯದೆ ಸೊಪ್ಪು ಕುಯ್ಯುತ್ತಿದ್ದ ವೇಳೆ ಹುಲಿ ಪಕ್ಕದ ನದಿ ದಡಕ್ಕೆ ಹಾರಿ ಹೋಯಿತು ಎಂದು ಪ್ರತ್ಯಕ್ಷದರ್ಶಿ ಮಲ್ಲಮಾಡ ಸೋಮಯ್ಯ ವಿವರಿಸಿದರು.

ಶಾಸಕರ ಭೇಟಿ: ಸ್ಥಳಕ್ಕೆ ಆಗಮಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರು ಹುಲಿ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳುವದು, ಕೂಂಬಿಂಗ್ ಕಾರ್ಯಾಚರಣೆ ನಡೆಸುವಂತೆ ಮತ್ತು ಹೆಚ್ಚುವರಿ ಪರಿಹಾರ ಹಣ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅರಣ್ಯ ಇಲಾಖಾಧಿಕಾರಿಗಳು ಭರವಸೆ ನೀಡಿದಂತೆ ಹೆಚ್ಚುವರಿ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ಕಚೇರಿ ಎದುರು ಗ್ರಾಮಸ್ಥರನ್ನು ಸೇರಿಸಿ ಪ್ರತಿಭಟನೆ ನಡೆಸುವದಾಗಿ ಪೋರಂಗಡ ಬೋಪಣ್ಣ ಎಚ್ಚರಿಸಿದರು. ಈ ಸಂದರ್ಭ ಪ್ರತಿಕ್ರಯಿಸಿದ ಆರ್.ಎಂ.ಓ. ಗಂಗಾಧರ್ ಸರಕಾರದ ನಿಯಮದಂತೆ ತಕ್ಷಣವೇ ರೂ.10 ಸಾವಿರ ಪರಿಹಾರ ಹಣವನ್ನು ಸಂತ್ರಸ್ತ ರೈತನ ಖಾತೆಗೆ ವರ್ಗಾಯಿಸಲಾಗುವದು. ಎ.ಸಿ.ಎಫ್ ಶ್ರೀಪತಿಯವರು ಕೇಸ್ ಇರುವ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿದ್ದು ಸ್ಥಳಕ್ಕೆ ತಡವಾಗಿ ಬರಲಿದ್ದಾರೆ. ಹೆಚ್ಚುವರಿ ಪರಿಹಾರದ ಬಗ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವದು ಎಂದು ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ವಾಪಾಸು ಪಡೆಯಲಾಯಿತು.

ಪ್ರತಿಭಟನೆ ವೇಳೆ ಗ್ರಾಮಸ್ಥರಾದ ಮಲ್ಲಮಾಡ ಪ್ರಭು ಪೂಣಚ್ಚ, ತಾಣಚ್ಚೀರ ದೀಪಕ್, ತೀತಿಮಾಡ ಜಯ, ಮಲ್ಲಮಾಡ ಈಶ್ವರ, ತೀತಮಾಡ ಪಾರ್ವತಿ, ಮಲ್ಲಮಾಡ ಸುಮಿ, ಕವಿತಾ, ಗುಡಿಯಂಗಡ ಶುಭಾ ಮತ್ತು ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ಪ್ರಮುಖರಾದ ಮಲ್ಲಂಡ ಮಧು ದೇವಯ್ಯ, ತೋರೀರ ವಿನು, ತೀತಿಮಾಡ ಲಾಲ ಭೀಮಯ್ಯ ಮತ್ತಿತರರು ಹಾಜರಿದ್ದರು.