ಮಡಿಕೇರಿ, ಜ. 21: ಜಿಲ್ಲಾ ಕೇಂದ್ರ ಮಡಿಕೇರಿಯ ದಾಸವಾಳ ಬಡಾವಣೆÉಯಲ್ಲಿರುವ ಶ್ರೀ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 22 ಅಡಿ ಎತ್ತರದ ವೀರಭದ್ರ ದೇವರ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯ ತಾ. 26 ಮತ್ತು 27 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದೇವಾಲಯ ಸಮಿತಿ ಗೌರವಾಧ್ಯಕ್ಷ ಪಿ.ಜಿ. ಮಂಜುನಾಥ್, ಕಳೆದ ಎರಡು ವರ್ಷಗಳ ಹಿಂದೆ ದೇವಾಲಯದ ಪುನರ್ ಪ್ರತಿಷ್ಠಾ ಕಾರ್ಯಗಳು ನೆರವೇರಿತ್ತು. ಇದೀಗ ತಮಿಳುನಾಡಿನ ಕುಂಭಕೋಣಂನ ಶಿಲ್ಪಿ ಶರವಣ ಅವರಿಂದ ನಿರ್ಮಿಸಲ್ಪಟ್ಟಿರುವ ವೀರಭದ್ರ ದೇವರ ಮೂರ್ತಿಯನ್ನು ಸುಮಾರು 5.50 ಲಕ್ಷ ವೆಚ್ಚದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರ್ತಿಯು ಕೊಡಗಿನ ಪ್ರಪ್ರಥಮ ವೀರಭದ್ರ ಮೂರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು.
ಕೇರಳದ ಬೈತೂರಿನ ಶ್ರೀ ಗೋಪಾಲಕೃಷ್ಣ ನಂಬೂದರಿ ನೇತೃತ್ವದಲ್ಲಿ ಪ್ರತಿಷ್ಠಾಪನಾ ಪೂಜಾ ಕೈಂಕರ್ಯಗಳು ತಾ. 26 ರ ಸಂಜೆ 5.30 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭವಾಗಲಿದ್ದು, ಬಳಿಕ ಗೋ ಪೂಜೆ, ಪುಣ್ಯಾಹವಾಚನ, ಬಿಂಬ ಪರಿಗ್ರಹ, ಪ್ರಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ಕುರುಧಿ ಪೂಜೆ ನೆರವೇರಲಿದೆ.
ತಾ. 27 ರಂದು ಬೆಳಗ್ಗೆ 7 ಗಂಟೆಗೆ ಶಕ್ತಿ ಗಣಪತಿ ಹೋಮ, ಬಳಿಕ ಪ್ರತಿಷ್ಠಾ ಹೋಮ, ಕಲಶ ಪೂಜೆ, ಬೆಳಗ್ಗೆ 9.09 ಗಂಟೆಯಿಂದ 9.45 ಗಂಟೆಯ ಶುಭ ಮುಹೂರ್ತದಲ್ಲಿ ಶ್ರೀ ವೀರಭದ್ರ ದೇವರ ಪ್ರಾಣ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ. ಬಳಿಕ ಮಹಾಪೂಜೆ , 12.30ಕ್ಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಸಂಜೆ 7 ಗಂಟೆಗೆ ಶ್ರೀ ವೀರಭದ್ರ ಮತ್ತು ಶ್ರೀ ಮುನೇಶ್ವರ ದೇವರಿಗೆ ವಿಶೇಷ ಪೂಜೆ, ಭಸ್ಮಾಭಿಷೇಕ ಜರುಗಲಿದೆ ಎಂದರು.
ಕಾರ್ಯಕ್ರಮದ ಅನ್ನಸಂತರ್ಪಣೆಗೆ ಭಕ್ತಾದಿಗಳು ಅಕ್ಕಿ, ತರಕಾರಿ, ದವಸ ಧಾನ್ಯಗಳನ್ನು ದಿನ ಮುಂಚಿತವಾಗಿ ತಲಪಿಸಬೇಕೆಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿ ಗಾಗಿ ಪಿ.ಜಿ. ಸುಕುಮಾರ್, ಅಧ್ಯಕ್ಷರು( ಮೊ.9343819138), ಕೆ. ಕಿಶೋರ್, ಪ್ರಧಾನ ಕಾರ್ಯದರ್ಶಿ (ಮೊ.9731024240) ಇವರನ್ನು ಸಂಪರ್ಕಿಸಬಹುದು. ಗೋಷ್ಠಿಯಲ್ಲಿ ದೇವಾಲಯ ಸಮಿತಿ ಉಪಾಧ್ಯಕ್ಷರಾದ ಎಂ.ಎಲ್. ಸತೀಶ್, ಖಜಾಂಚಿ, ಎ.ಬಿ. ಅರುಣ್ ರಾಜ್, ಪ್ರಧಾನ ಕಾರ್ಯದರ್ಶಿ ಕೆ. ಕಿಶೋರ್ ಕುಮಾರ್, ಸಹ ಕಾರ್ಯದರ್ಶಿ ವಿಷ್ಣು, ಸದಸ್ಯ ರಾಕೇಶ್ ಹಾಜರಿದ್ದರು.