ಶನಿವಾರಸಂತೆ, ಜ. 21: ಶನಿವಾರಸಂತೆ ಚೆಸ್ಕಾಂ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಾದ ಹೆಚ್.ಡಿ. ಲೋಕೇಶ್ ಹಾಗೂ ಎಂ.ಎ. ದರ್ಶನ್‍ಗೌಡ ಅವರುಗಳ ಮೇಲೆ ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಬೀಕಳ್ಳಿ ಗ್ರಾಮದ ರಾಜೇಶ್ ಎಂಬವರು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರ ಬೆಳಿಗ್ಗೆ 8.30 ಗಂಟೆಗೆ ಕೆಲಸಕ್ಕೆ ಹಾಜರಾಗಿದ್ದ ಮ್ಯಾಕನಿಕ್ ಗ್ರೇಸ್ ಹೆಚ್.ಡಿ. ಲೋಕೇಶ್, ಕಿರಿಯ ಪವರ್ ಮ್ಯಾಕೆನಿಕ್ ಎಂ.ಎ. ದರ್ಶನ್‍ಗೌಡ ಅವರುಗಳನ್ನು ಹಂಡ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್‍ಎಸ್‍ಐಪಿರಲ್ಲಿ ಬಿಲ್ ಪಾವತಿಸದೆ ಬಾಕಿ ಇರುವ (ರೂ. 88,509) ವಿದ್ಯುತ್ ಸ್ಥಾವರವನ್ನು ನಿಲುಗಡೆಗೊಳಿಸಲು ಪಟ್ಟಿ ನೀಡಿ ಕೆಲಸಕ್ಕೆ ನೇಮಿಸಲಾಗಿತ್ತು. ಅದರಂತೆ ಇವರುಗಳು ಕರ್ತವ್ಯ ನಿರ್ವಹಿಸಲು ತೆರಳಿದಾಗ ಬೀಕಳ್ಳಿ ಗ್ರಾಮದ ರಾಜೇಶ್ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.

ಅಲ್ಲದೆ ಈ ರಸ್ತೆಯಲ್ಲಿ ಮತ್ತೆ ಬಂದರೆ ಕತ್ತಿಯಿಂದ ಕಡಿಯುವದಾಗಿ ಬೆದರಿಕೆ ಹಾಕಿರುತ್ತಾನೆ ಎಂದು ಚೆಸ್ಕಾಂ ಶಾಖೆಯ ಕಿರಿಯ ಇಂಜಿನಿಯರ್ ಬಿ.ಪಿ. ಹೇಮಂತ್‍ಕುಮಾರ್ ನೀಡಿದ ಲಿಖಿತ ದೂರಿನ ಮೇರೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಕಲಂ 353, 506 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.