ಸೋಮವಾರಪೇಟೆ, ಜ.21: ಬೆಂಗಳೂರಿನ ಶಾರದ ಪ್ರತಿಷ್ಠಾನ ಮತ್ತು ಶಾಂತಳ್ಳಿಯ ಪ್ರಕೃತಿ ಸಾಹಿತ್ಯ ಬಳಗದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಸಮೀಪದ ಹಾನಗಲ್ಲು ಗ್ರಾ.ಪಂ. ಆವರಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಮತ್ತು ಗಾನ ಸೌರಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ಕಲೆ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ ಸಾಹಿತ್ಯದ ಬೆಳವಣಿಗೆ ಆಗಬೇಕಾದರೆ ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಅವಶ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಶಾರದ ಪ್ರತಿಷ್ಠಾನದ ಅಧ್ಯಕ್ಷ ಡಾ. ಹುಲಿವಾನ ನರಸಿಂಹ ಸ್ವಾಮಿ ಅವರು, ಕುವೆಂಪು ಅವರ ಸಾಹಿತ್ಯ ಸೇವೆ, ಕಾವ್ಯ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾನಗಲ್ಲು ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್ ವಹಿಸಿದ್ದರು.
ವೇದಿಕೆಯಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ, ಗ್ರಾ.ಪಂ. ಸದಸ್ಯೆ ವನಜಾಕ್ಷಿ ತಿಮ್ಮಯ್ಯ, ಜ್ಞಾನವಿಕಾಸ ಶಾಲೆಯ ಶಿಕ್ಷಕಿ ಸುಮತಿ, ಪ್ರಕೃತಿ ಸಾಹಿತ್ಯ ಬಳಗದ ಅಧ್ಯಕ್ಷೆ ರಾಧಿಕಾ ಕಾಳಪ್ಪ, ಉಪಾಧ್ಯಕ್ಷ ಮಧುಕುಮಾರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವೀಶ್, ಅವರುಗಳು ಉಪಸ್ಥಿತರಿದ್ದರು.
ತಾಲೂಕು ಮಟ್ಟದ ಕವಿಗೋಷ್ಠಿಯಲ್ಲಿ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.