ಮಡಿಕೇರಿ, ಜ. 21: ಜಿಲ್ಲೆಯ ಗಡಿಗ್ರಾಮ ಅರಂತೋಡುವಿನ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಮೃತ ಮಹೋತ್ಸವದೊಂದಿಗೆ, ನಿರಂತರ 75 ಗಂಟೆಗಳ ಮೂರು ದಿವಸ ಭಜನೆ ನೆರವೇರಿತು. 75 ವರ್ಷಗಳನ್ನು ಕಂಡಿರುವ ಭಜನಾ ಮಂದಿರದ ಸವಿನೆನಪಿಗಾಗಿ ಈ ವಿನೂತನ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಅರಂತೋಡುವಿನ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. 75 ಗಂಟೆಗಳ ಹಗಲಿರುಳು ಜರುಗಿದ ಭಜನೆಯಲ್ಲಿ ತಾ. 17 ರಿಂದ 20ರ ತನಕ ಮಂದಿರದಲ್ಲಿ ಸರದಿಯಂತೆ ಹತ್ತಾರು ಭಜನಾ ತಂಡಗಳು ಪಾಲ್ಗೊಂಡಿದ್ದವು.
ಅರಂತೋಡು ಗ್ರಾ.ಪಂ. ಹಾಗೂ ಅಲ್ಲಿನ ಕೃಷಿ ಪತ್ತಿನ ಸಹಕಾರ ಸಂಘ ಸಹಿತ ಇತರ ಸಂಘ ಸಂಸ್ಥೆಗಳು, ಗ್ರಾಮಸ್ಥರು ಭಜನಾ ಕಾರ್ಯನಿಮಿತ್ತ ಸತತ ಮೂರು ದಿವಸ ಉಪಹಾರ, ಊಟ ಇನ್ನಿತರ ವ್ಯವಸ್ಥೆಗೆ ಸಹಯೋಗ ನೀಡಿದ್ದರು. ಶ್ರೀ ದುರ್ಗಾಮಾತಾ ಭಜನಾ ಮಂದಿರದ ಅಧ್ಯಕ್ಷ ಯು.ಎಂ. ನಾರಾಯಣಗೌಡ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಿತು. ಕೆವಿಜಿ ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ ಪ್ರಾಸ್ತಾವಿಕ ನುಡಿಯೊಂದಿಗೆ ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಧಾರ್ಮಿಕ ಉಪನ್ಯಾಸ ನೀಡಿದರು. ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ ಅವರು ಪಾಲ್ಗೊಂಡು ಮಾತನಾಡುತ್ತಾ, ಜಾತಿ, ಮತ, ಬೇಧ ಮರೆತು ಎಲ್ಲಾ ಒಗ್ಗೂಡಿ ಬಾಳಲು ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯೆಂದು ಆಶಿಸಿದರು. ಜಿ.ಪಂ. ಸದಸ್ಯ ಹರೀಶ್, ತಾ.ಪಂ. ಸದಸ್ಯೆ ಪುಷ್ಪಮೇದಪ್ಪ, ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಶಿವಾನಂದ ಸೇರಿದಂತೆ ತೊಡಿಕಾನ ದೇವಾಲಯ ಸಮಿತಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ವಾಹನ ಚಾಲಕ - ಮಾಲೀಕರ ಸಂಘ, ಶೈಕ್ಷಣಿಕ ಸಮಿತಿ, ವಿಹಿಂಪ, ಬಜರಂಗದಳ ಸೇರಿದಂತೆ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಸಮಾಜದ ವಿವಿಧ ರಂಗದ ಗಣ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು.