ಸೋಮವಾರಪೇಟೆ,ಜ.21: ದೇವಾಲಯದ ಬೀಗ ಒಡೆದು ಕಳವಿಗೆ ಯತ್ನಿಸಿದ ಯುವಕನೋರ್ವನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಸಮೀಪದ ಬಜೆಗುಂಡಿ ಗ್ರಾಮದಲ್ಲಿರುವ ಶ್ರೀ ಮಾರಿಯಮ್ಮ ದೇವಾಲಯದಲ್ಲಿ ಕಳವಿಗೆ ಯತ್ನಿಸುತ್ತಿದ್ದ ಅದೇ ಗ್ರಾಮದ ಹರೀಶ್ ಎಂಬವರ ಮಗ ಚೆಲುವ ಎಂಬಾತನೇ ಬಂದಿತ ಆರೋಪಿಯಾಗಿದ್ದು, ಇಂದು ಮುಂಜಾನೆ 3 ಗಂಟೆ ಸುಮಾರಿಗೆ ದೇವಾಲಯದ ಬೀಗ ಒಡೆಯುತ್ತಿದ್ದ ಸಂದರ್ಭ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಾನೆ.
ಮುಂಜಾನೆ ದೇವಾಲಯದಿಂದ ಶಬ್ದ ಕೇಳಿಬಂದ ಹಿನ್ನೆಲೆ ಸ್ಥಳೀಯ ನಿವಾಸಿ ಸುಬ್ರಮಣಿ ಮತ್ತಿತರರು ಅತ್ತ ತೆರಳಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಠಾಣಾಧಿಕಾರಿ ಶಿವಶಂಕರ್, ಸಿಬ್ಬಂದಿಗಳಾದ ಕುಮಾರ್, ಶಿವಕುಮಾರ್, ಜಗದೀಶ್ ಅವರುಗಳು ತೆರಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ದೇವಾಲಯದ ಒಳಗಿರುವ ಆಭರಣಗಳನ್ನು ಕಳವು ಮಾಡಲು ಯತ್ನಿಸಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಬಂದಿತ ಆರೋಪಿಯ ವಿರುದ್ಧ 457, 380, 511 ಅನ್ವಯ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.