ಕೂಡಿಗೆ, ಜ. 20: ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು ಮನಬಂದಂತೆ ನಿರಾಪೇಕ್ಷಣಾ ಪತ್ರವನ್ನು ನೀಡಿದೆ ಎಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮರೂರು ಗ್ರಾಮದ ನಿವಾಸಿ ನಿವೃತ್ತ ಸೈನಿಕ ಹೆಚ್.ಟಿ. ಜಯಂತ್ ಅವರು ಎಸಿಬಿಗೆ ದೂರು ನೀಡಿದ್ದ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಹುಲುಸೆ ಗ್ರಾಮದಲ್ಲಿ ಶುಂಠಿ ತೊಳೆಯುವ ಯಂತ್ರವನ್ನು ಅಳವಡಿಸಿರುವ ಬಗ್ಗೆ, ಕೆಲವು ವಾಣಿಜ್ಯ ಮಳಿಗೆಗಳಿಗೆ, ಕೆಲವು ಪೈಸಾರಿ ಜಾಗವನ್ನು ಸೈಟ್‍ಗಳನ್ನು ಪರಿವರ್ತಿಸಲು ಕ್ರಮಬದ್ಧವಾಗಿ ನಿಯಮನುಸಾರವಾಗಿ ಎನ್‍ಒಸಿ ನೀಡದೆ ಮನಬಂದಂತೆ ಎನ್‍ಒಸಿ ನೀಡಿದ್ದಾರೆ ಎಂದು ಆರೋಪವಿರುವ ಬಗ್ಗೆ ಸದಸ್ಯರು ಚರ್ಚೆ ನಡೆಸಿದರು. ಅಲ್ಲದೆ, 47/2ರಲ್ಲಿ ರೆವಿನ್ಯೂ ಜಾಗ ವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸುದೀರ್ಘ ಚರ್ಚೆ ನಡೆದು, ಒತ್ತುವರಿ ಜಾಗವನ್ನು ತೆರವುಗೊಳಿಸ ಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು.
ಈ ಸಂದರ್ಭ ಸದಸ್ಯರೊಳಗೆ ಪರ ವಿರೋಧ ಚರ್ಚೆಗಳು ನಡೆದು, ಮುಂದಿನ ದಿನಗಳಲ್ಲಿ ಮೇಲ್ಮಟ್ಟದ ಅಧಿಕಾರಿಗಳಿಗೆ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲು ಕಡತಗಳನ್ನು ರವಾನಿಸು ವಂತೆ ಸಭೆಯಲ್ಲಿ ತೀರ್ಮಾನಿಸ ಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಕಂದಾಯ ಇಲಾಖೆಯ ವತಿಯಿಂದ ತಹಶೀಲ್ದಾರ್ ಮುಖೇನ ಕೆಲವು ಹಕ್ಕು ಪತ್ರಗಳನ್ನು ನೀಡಲಾಗಿದೆ. ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು ಕೆಲವು ಮಳಿಗೆಗಳಿಗೆ ಅನುಮತಿ ಪತ್ರಗಳನ್ನು ನೀಡಲಾಗಿದೆ. ಇವುಗಳನ್ನು ಕ್ರಮಬದ್ಧವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮ, ಸದಸ್ಯರಾದ ಸರೋಜಮ್ಮ, ವೆಂಕಟೇಶ್, ಚೇತನ್, ಮಧುಸೂಧನ್, ದಿನೇಶ್, ದೇವಮ್ಮ, ಅಶೋಕ್, ವಿಜಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್, ಕಾರ್ಯದರ್ಶಿ ರಜನಿ ಇದ್ದರು.