ಮಡಿಕೇರಿ, ಜ. 20: ‘ಕಾರ್ಮಿಕರ ಸನ್ಮಾನ ದಿನ’ ಪ್ರಯುಕ್ತ ವಿಶೇಷ ಸಾಧನೆ ಮಾಡಿದ ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಸನ್ಮಾನ ಪ್ರಶಸ್ತಿ ನೀಡುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಅವರ ಉಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಅವರು ವಿಶೇಷ ಅಸಂಘಟಿತ ವಲಯಗಳಾದ ಟೈಲರ್, ಮೆಕಾನಿಕ್, ಚಿಂದಿ ಆಯುವವರು, ಸಾರಿಗೆ ಕಾರ್ಮಿಕರು ಮತ್ತಿತರ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಎಂದರು.

ಈ ವಲಯಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ತಲಾ ಒಬ್ಬರಂತೆ ಮಾರ್ಚ್ 1 ರಂದು ಸನ್ಮಾನಿಸುವ ಬಗ್ಗೆ ಚರ್ಚೆ ನಡೆಯಿತು.

ಕಾರ್ಮಿಕ ವರ್ಗ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ 11 ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಮಿಕರು ಸ್ಮಾರ್ಟ್ ಕಾರ್ಡ್ ಪಡೆಯಲು ನಿಗದಿತ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಕಾರ್ಮಿಕ ಇಲಾಖೆಗೆ ಸಲ್ಲಿಸುವಂತೆ ಮನವಿ ಮಾಡಿದರು. ಕಾರ್ಮಿಕರಿಗೆ ಸನ್ಮಾನ ಪ್ರಶಸ್ತಿಗಾಗಿ ನಮೂನೆ 5 ರಲ್ಲಿ ಭರ್ತಿ ಮಾಡಿ ಫೆಬ್ರವರಿ 5 ರೊಳಗೆ ಸಲ್ಲಿಸುವಂತೆ ಅವರು ಕೋರಿದ್ದಾರೆ.