ಕೂಡಿಗೆ, ಜ. 19: 1993-94 ನೇ ಸಾಲಿನಲ್ಲಿ ಅಂದಿನ ಶಾಸಕರಾದ ಬೆಳ್ಳಿಯಪ್ಪ ಅವರ ಸಹಕಾರದಿಂದ ಎಸ್.ವಿ.ನಂಜುಂಡಪ್ಪ, ಎಸ್.ಎಚ್.ರಾಜಪ್ಪ, ಎಸ್.ಟಿ ಅಶ್ವಥ್‍ಕುಮಾರ್ ಹಾಗೂ ಇತರರ ಪ್ರಯತ್ನದಿಂದ ಆರಂಭಗೊಂಡ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಈ ಶೈಕ್ಷಣಿಕ ವರ್ಷಕ್ಕೆ 25 ವರ್ಷ ತುಂಬಲಿದೆ.
ಈ ಸಂದರ್ಭದಲ್ಲಿ ಅರ್ಥಪೂರ್ಣ ಕಾರ್ಯಕ್ರಮವಾಗ ಬೇಕು, ಹಚ್ಚ ಹಸಿರಾಗಿ ಜನಮಾನಸದಲ್ಲಿ ಉಳಿಯಬೇಕು ಎಂಬ ಸದುದ್ದೇಶದಿಂದ ಹಿರಿಯ ವಿದ್ಯಾರ್ಥಿಗಳು, ಮಂಡಿಗಮ್ಮ ದೇವತಾ ಸಮಿತಿ, ಕಾಲೇಜು ಅಭಿವೃದ್ಧಿ ಸಮಿತಿ, ದಾನಿಗಳು, ಗ್ರಾಮಸ್ಥರು, ಅಧ್ಯಾಪಕರು, ಶಾಸಕರ ಸಹಕಾರದಿಂದ ಸುಮಾರು 16 ಲಕ್ಷ ರೂಗಳ ವೆಚ್ಚದಲ್ಲಿ ಶಾರದಾ ಮಂದಿರ, ಮುಖ್ಯದ್ವಾರ, ಕ್ರೀಡಾಂಗಣ ಗ್ಯಾಲರಿ, ಆಧುನಿಕ ಶಿಕ್ಷಣದ ಸ್ಪರ್ಶ ಮೊದಲಾದ ಕೆಲಸಗಳನ್ನು ಹಮ್ಮಿಕೊಳ್ಳಲಾಗಿದೆ. ಶಾರದಾ ಮಂದಿರ ಮತ್ತು ಕ್ರೀಡಾಂಗ ಣದ ಗ್ಯಾಲರಿ ಪೂರ್ಣಗೊಂಡಿದ್ದು, ಮುಖ್ಯದ್ವಾರದ ಕೆಲಸ ಪ್ರಗತಿಯಲ್ಲಿದೆ.
ಈ ಕಾಲೇಜು ಪ್ರಾರಂಭ ದಿಂದಲೂ ತನ್ನದೇ ಆದ ಹಿರಿಮೆ, ಗರಿಮೆಯನ್ನು ಸಾಧಿಸಿಕೊಂಡು ಬಂದಿದೆ. ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಕಾಲೇಜು ಆದರೂ ಯಾವದೇ ಪ್ರತಿಷ್ಠಿತ ಖಾಸಗಿ ಕಾಲೇಜಿಗೆ ಕಮ್ಮಿ ಇಲ್ಲದಂತೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೊರಹೊಮ್ಮಿಸುತ್ತಿದೆ. 1994 ರಲ್ಲಿ ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ ಪಡೆದ ಕಾಲೇಜು, 2014-15ನೇ ಸಾಲಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇಕಡ 100 ಫಲಿತಾಂಶ ಪಡೆದು, 2017-18ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡ 100 ಫಲಿತಾಂಶ ಪಡೆದ ಹೆಗ್ಗಳಿಕೆಗೆ ಕಾಲೇಜು ಪಾತ್ರವಾಗಿದೆ. ಈ ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ಪ್ರಸಿದ್ಧಿಗೆ ಪ್ರಾಂಶುಪಾಲರುಗಳಾಗಿದ್ದ ಕೆ.ಬಿ. ಕೆಂಪೇಗೌಡ, ಎ.ವಿ. ಅಲ್ವಾರಿಸ್, ಸಿ.ಎಂ. ಮಹಾಲಿಂಗಯ್ಯ, ಎಂ.ಆರ್. ಸುರೇಶ್ ಕುಮಾರ್, ಪ್ರಸ್ತುತ ಹಂಡ್ರಂಗಿ ನಾಗರಾಜ್ ಹಾಗೂ ಇತರ ಉಪನ್ಯಾಸಕ ವರ್ಗದವರ ಪರಿಶ್ರಮವಿದೆ.
ಕ್ರೀಡಾ ವಲಯದಲ್ಲಿ ಕಾಲೇಜು ಸತತ ಹದಿನೈದು ವರ್ಷಗಳಿಂದ ಖೋ ಖೋ ತಂಡ ರಾಜ್ಯ ಮಟ್ಟವನ್ನು ಪ್ರವೇಶಿಸುತ್ತಿದೆ. ಥ್ರೋಬಾಲ್ ಬಾಲಕರ ವಿಭಾಗದಲ್ಲಿ ಸತತ ಮೂರು ವರ್ಷ ರಾಜ್ಯವನ್ನು ಪ್ರತಿನಿಧಿಸಿ ಹ್ಯಾಟ್ರಿಕ್ ಬಾರಿಸಿದೆ. ಕ್ರೀಡಾವಲಯದಲ್ಲಿ ಶಿರಂಗಾಲ ಕಾಲೇಜಿನ ಗರಿಮೆ ಹೆಚ್ಚಲು ಪ್ಯಾರಒಲಂಪಿಕ್ಸ್‍ನಲ್ಲಿ ಭಾಗವಹಿಸಿದ ಇದೇ ಕಾಲೇಜಿನ ವಿದ್ಯಾರ್ಥಿ ಹೆಚ್.ಎನ್.ಗಿರೀಶ್ ಕಾರಣರಾಗಿದ್ದಾರೆ. ಎನ್‍ಎಸ್‍ಎಸ್ ಘಟಕವಿದ್ದು ಅದರಿಂದಲೂ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಹೆಸರು ಪಡೆದಿದೆ.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಬಹುಮುಖ ಪ್ರತಿಭೆಗಳನ್ನು ಹೊರಹೊಮ್ಮಿಸುವ ಕಾರ್ಯದಲ್ಲಿ ಈ ಕಾಲೇಜಿನ ಪ್ರಾಂಶುಪಾಲರು, ಬೋಧಕ ವರ್ಗದವರು ತೊಡಗಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದು, ಮಾರ್ಗದರ್ಶನ ನೀಡುತ್ತಿದ್ದಾರೆ. ಕಾಲೇಜು ಮತ್ತು ಪ್ರೌಢಶಾಲೆ ಉತ್ತಮ ಸಂಬಂಧವನ್ನು ಹೊಂದಿದ್ದು, ಎಲ್ಲಾ ವಲಯದಲ್ಲೂ ಆರೋಗ್ಯಕರವಾದ ಪೈಪೆÇೀಟಿ ಯೊಂದಿಗೆ ಉತ್ತಮ ಒಡನಾಟದ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿವೆ.
ರಜತ ಮಹೋತ್ಸವ
ತಾ. 20 ರುಂದು (ಇಂದು) ಗಣ್ಯರು ಶಾರದ ಮಂದಿರವನ್ನು ಉದ್ಘಾಟಿಸಲಿದ್ದು, ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿಗಳು ಶಾರದ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವವನ್ನು ನೆರವೇರಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಕಾಲೇಜಿನ ನೂತನ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ. ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಕ್ರೀಡಾಂಗಣದ ಗ್ಯಾಲರಿ ಉದ್ಘಾಟಿಸಲಿದ್ದು, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಅವರು ಬೆಳ್ಳಿ ಭವನದ ಹೆಚ್ಚುವರಿ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಉದ್ಘಾಟಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ಭೋಜೇಗೌಡ ಅವರು ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿ.ಪಂ ಸದಸ್ಯ ಹೆಚ್.ಎಸ್.ಶ್ರೀನಿವಾಸ್, ತಾ.ಪಂ ಅಧ್ಯಕ್ಷೆ ಪುಷ್ಪಾ ರಾಜೇಶ್, ಸದಸ್ಯ ಜಯಣ್ಣ, ಶಿರಂಗಾಲ ಗ್ರಾ.ಪಂ ಅಧ್ಯಕ್ಷ ಎನ್.ಎಸ್.ರಮೇಶ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್.ಬಿ.ಮಹೇಶ್, ಮಾಜಿ ಅಧ್ಯಕ್ಷ ಎಸ್.ವಿ.ನಂಜುಂಡಪ್ಪ, ಕೊಡಗು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಕೆಂಚಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪೆರಿಗ್ರಿನ್ ಎಸ್. ಮಚಾಡೋ, ಮಂಟಿಗಮ್ಮ ದೇವತಾ ಸಮಿತಿಯ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಸಿ.ಎನ್.ಲೋಕೇಶ್ ಆಗಮಿಸಲಿದ್ದಾರೆ.
ಮಧ್ಯಾಹ್ನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ಬಿ.ಎಸ್.ಲೋಕೇಶ್ ಸಾಗರ್ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.