ಚೆಟ್ಟಳ್ಳಿ, ಜ. 19: ಹೆಚ್ಚು ಶಬ್ಧ ಮಾಡಿ ಜನಸಾಮಾನ್ಯರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಬೈಕ್‍ಗಳ ಸೈಲೆನ್ಸರ್ ಪೈಪುಗಳನ್ನು ತೆಗೆದು ಹಾಕಿ ಕಾನೂನಿನ ಅರಿವು ಮೂಡಿಸಲು ಮುಂದಾದ ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಸೋಮೇಗೌಡ ಅವರ ಶ್ರಮಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಭಾರೀ ಶಬ್ಧ ಮಾಡುವ ಹಾಗೂ ಶಬ್ಧ ಮಾಲಿನ್ಯ ಉಂಟು ಮಾಡುವ ಕೆಲವು ವಾಹನಗಳಿಂದ ಇಲ್ಲಿನ ಜನರಿಗೆ ತೊಂದರೆ ಉಂಟಾಗಿದ್ದು, ಸಾರ್ವಜನಿ ಕರು ಸಂಚಾರಿ ಪೊಲೀಸರಿಗೆ ದೂರು ನೀಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಕ್ರಮ ಕೈಗೊಳ್ಳಲು ಮುಂದಾದ ಕುಶಾಲನಗರ ಸಂಚಾರಿ ಪೊಲೀಸರು, ಕರ್ಕಶ ಶಬ್ಧವನ್ನುಂಟುಮಾಡುವ ಬೈಕುಗಳ ಸೈಲೆನ್ಸರ್ ಪೈಪನ್ನು ತೆಗೆದು ಹಾಕಿ ಕಾನೂನಿನ ಅರಿವು ಮೂಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಠಾಣಾಧಿಕಾರಿ ಸೋಮೇಗೌಡ, ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಕುಶಾಲನಗರದ ಟ್ರಾಫಿಕ್ ಸಮಸ್ಯೆಯನ್ನು ಹಂತ ಹಂತವಾಗಿ ಸರಿಪಡಿಸುತ್ತಾ ಬರುತ್ತಿದ್ದು, ಇಂದು ಶಬ್ಧ ಮಾಲಿನ್ಯ ಸೃಷ್ಟಿಸುವ ಬೈಕುಗಳ ಸೈಲೆನ್ಸರ್ ಪೈಪ್ ತೆಗೆದು ಹಾಕಿ ಕಾನೂನಿನ ಅರಿವು ಮೂಡಿಸಲಾಗಿದೆ. ಸಂಚಾರಿ ನಿಯಮವನ್ನು ಪಾಲಿಸುವ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮುಂದಿನ ತಿಂಗಳು ಕೂಡ ‘ರೋಡ್ ಸೇಫ್ಟಿ’ ಎಂಬ ಅರಿವು ಕಾರ್ಯಕ್ರಮವನ್ನು ನಡೆಸಲಾಗುವದು ಎಂದರು.

ಕೆಲವು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪುಂಡ ಹುಡುಗರು, ಶಾಲಾ ಕಾಲೇಜುಗಳ ಬಳಿ ತೆರಳಿ ಅನವಶ್ಯಕ ಶಬ್ಧ ಉಂಟುಮಾಡಿ ಕಿರಿಕಿರಿ ನೀಡುತ್ತಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಾಲೇಜಿಗೆ ತೆರಳುವ ಹಾಗೂ ಹಿಂದಿರುಗುವ ವೇಳೆ ಅತೀವೇಗದಿಂದ ಹಾಗೂ ಅಜಾಗರೂ ಕತೆಯಿಂದ ತೆರಳಿ ವಿದ್ಯಾರ್ಥಿಗಳಲ್ಲಿ ಭಯವನ್ನುಂಟು ಮಾಡುತ್ತಿದ್ದಾರೆ. ಯಾವದೇ ದಾಖಲಾತಿಗಳಿಲ್ಲದೆ ಬೇಕಾಬಿಟ್ಟಿ ಯಾಗಿ ಕಾನೂನನ್ನು ಗಾಳಿಗೆ ತೂರಿ ವಾಹನ ಚಲಾಯಿಸುತ್ತಾರೆ. ರಾತ್ರಿ ವೇಳೆ ಹೆಚ್ಚು ಬೆಳಕನ್ನು ಸೂಸುವ ಎಲ್.ಇ.ಡಿ ಲೈಟನ್ನು ಅಳವಡಿಸಿರುವ ವಾಹನ ಗಳಿಂದ ತೊಂದರೆ ಯುಂಟಾಗಿದ್ದು, ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಇಂತಹವರ ಮೇಲೆ ಸಂಚಾರಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಮಹೇಶ್ ಆಗ್ರಹಿಸಿದ್ದಾರೆ.

ಈ ಸಂದರ್ಭ ಸಂಚಾರಿ ಪೊಲೀಸ್ ಸಿಬ್ಬಂದಿಗಳಾದ ಹೆಚ್.ಆರ್. ಶ್ರೀನಿವಾಸ್, ಸಂದೇಶ್, ಮಣಿಕಂಠ, ಸತೀಶ್, ಚಂಗಪ್ಪ ಹಾಗೂ ಗೃಹರಕ್ಷಕ ಸಿಬ್ಬಂದಿಗಳು ಇದ್ದರು.