ಸೋಮವಾರಪೇಟೆ, ಜ. 19: ಶಾಸ್ತ್ರೀಯ ಕ್ರಮದಿಂದ ಹೊರತಾಗಿರುವ ಜಾನಪದವು ನೃತ್ಯ, ಕಲೆ, ಆಚಾರ, ವಿಚಾರ, ಸಂಸ್ಕøತಿಯಲ್ಲಿ ಅಡಗಿದೆ. ಇದಕ್ಕೆ ಹೃದಯದ ಬಡಿತ ತಾಳವಾದರೆ; ಸಂವೇದನೆಯೇ ರಾಗ. ಇಂತಹ ಅಮೂಲ್ಯ ಪ್ರಾಕಾರವನ್ನು ಉಳಿಸಿ ಬೆಳೆಸುವದು ಸಮಾಜದ ಅಗತ್ಯವೂ ಆಗಿದೆ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅಭಿಮತ ವ್ಯಕ್ತಪಡಿಸಿದರು.

ಜಾನಪದ ಪರಿಷತ್ ಸೋಮವಾರಪೇಟೆ ತಾಲೂಕು ಘಟಕ, ಶನಿವಾರಸಂತೆ ಮತ್ತು ಸೋಮವಾರಪೇಟೆ ಹೋಬಳಿ ಘಟಕದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ನಡೆದ ತಾಲೂಕು ಮಟ್ಟದ ಜಾನಪದ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ, ಸಂಗೀತ, ನೃತ್ಯ, ಆಟ ಈ ಎಲ್ಲವನ್ನು ಒಳಗೊಂಡಿರುವದೇ ಜಾನಪದ. ಇದಕ್ಕೆ ಶಾಸ್ತ್ರೀಯ ಕ್ರಮವಿಲ್ಲ. ಅಕ್ಷರ ಜ್ಞಾನವಿಲ್ಲದ ಕಾಲದಲ್ಲೇ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲೆಯ ಮೂಲಕ ಬದುಕು ಕಟ್ಟಿಕೊಂಡವರು ಹೆಚ್ಚಿದ್ದರು. ಈಗಲೂ ಅತೀಹೆಚ್ಚು ಜನರು ಪ್ರೀತಿಸುವ ಕಲೆ ಜಾನಪದ ಎಂದು ಅಭಿಪ್ರಾಯಿಸಿದರು.

ಮಕ್ಕಳಲ್ಲಿ ಸಂಸ್ಕಾರ ಮೂಡಿಸಬೇಕು. ಇದಕ್ಕೆ ಪೋಷಕರು ಮೊದಲು ಸಂಸ್ಕಾರವಂತರಾಗಬೇಕು ಎಂದ ಅವರು, ನಮ್ಮನ್ನು ನಾವು ಅರಿತುಕೊಳ್ಳುವಂತಾಗಬೇಕು. ಬದುಕು ಯಾಂತ್ರಿಕವಾಗಬಾರದು. ನಾವು ಬದಲಾದರೆ ಸಮಾಜ ಬದಲಾಗುತ್ತದೆ ಎಂಬದನ್ನು ಅರಿಯುವದರೊಂದಿಗೆ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಹೆಚ್.ಟಿ. ಅನಿಲ್ ಮಾತನಾಡಿ, ಜಿಲ್ಲೆಯಲ್ಲಿ ಜಾನಪದ ಪರಿಷತ್ 3ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಈವರೆಗೆ 7 ಘಟಕಗಳನ್ನು ಸ್ಥಾಪಿಸಿ ರಾಜ್ಯದಲ್ಲಿಯೇ ಮಾದರಿಯಾಗಿದೆ. ಜಿಲ್ಲೆಯ ಜಾನಪದ ಕಲಾವಿದರ ಸಮಗ್ರ ಮಾಹಿತಿ ಕೋಶವನ್ನು ಹೊರತರಲು ಯೋಜಿಸಲಾಗಿದ್ದು, ಕಲಾವಿದರ ಬಗ್ಗೆ ಮಾಹಿತಿಯನ್ನು ಪರಿಷತ್‍ಗೆ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ವಹಿಸಿದ್ದರು. ವೇದಿಕೆಯಲ್ಲಿ ಜಾನಪದ ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಆಹಮ್ಮದ್, ಸೋಮವಾರಪೇಟೆ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ಮುರುಳೀಧರ್, ಶನಿವಾರಸಂತೆ ಹೋಬಳಿ ಅಧ್ಯಕ್ಷೆ ಡಿ.ಸುಜಲಾದೇವಿ, ರೋಟರಿ ಮಾಜಿ ಅಧ್ಯಕ್ಷ ಎ.ಪಿ.ವೀರರಾಜು, ಹಿರಿಯ ಸಾಹಿತಿ ಜಲಾಕಾಳಪ್ಪ ಉಪಸ್ಥಿತರಿದ್ದರು.

ಪರಿಷತ್‍ನ ಪದಾಧಿಕಾರಿಗಳಾದ ಮಾಲಂಬಿ ದಿನೇಶ್ ಸ್ವಾಗತಿಸಿ, ದೀಪಿಕಾ ಸುದರ್ಶನ್ ಪ್ರಾರ್ಥಿಸಿ, ವಿಜಯ್ ಹಾನ್‍ಗಲ್ ನಿರೂಪಿಸಿದರು.

ತಾಲೂಕು ಮಟ್ಟದ ನೃತ್ಯ ಸ್ಪರ್ಧೆಯಲ್ಲಿ 25ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಗ್ರಾಮೀಣ ಸಂಸ್ಕøತಿ ಯನ್ನು ಬಿಂಬಿಸುವ ಉಡುಗೆ, ಪರಿಕರ ಗಳೊಂದಿಗೆ ಹೆಜ್ಜೆ ಹಾಕಿದ ವಿದ್ಯಾರ್ಥಿ ಗಳು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.