ಮಡಿಕೇರಿ, ಜ. 19: ಗಾಳಿಬೀಡುವಿನಿಂದ ಮಡಿಕೇರಿಗೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲು ಅಲ್ಲಿನ ಪಂಚಾಯಿತಿಯ ಗ್ರಾಮಸಭೆಯಲ್ಲಿ ತೀರ್ಮಾನಿಸಿರುವ ಪ್ರಕರಣ ಗಂಭೀರವಾಗಿದ್ದು, ಈ ಬಗ್ಗೆ ಸಂಬಂಧಿಸಿದವ ರೊಂದಿಗೆ ಚರ್ಚಿಸಲಾಗುತ್ತಿದೆ. ಆದರೆ ವಿಚಾರದಲ್ಲಿ ನಗರಸಭೆಯಿಂದ ಲೋಪವಾಗಿಲ್ಲ ಎಂದು ನಗರಸಭಾ ಆಯುಕ್ತ ರಮೇಶ್ ಅವರು ತಿಳಿಸಿದ್ದಾರೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಆಯುಕ್ತರು ಮಡಿಕೇರಿ ನಗರಸಭೆಯ ತಪ್ಪು ಇಲ್ಲಿ ಇಲ್ಲವಾದರೂ, ಈ ಬಗ್ಗೆ ಸೂಕ್ತ ಪ್ರಯತ್ನ ನಡೆಸಲಾಗುವದು, ಕುಂಡಾಮೇಸ್ತ್ರಿ ಯೋಜನೆಯ ಕಾಮಗಾರಿಯನ್ನು ನಡೆಸಿರುವದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಾಗಿದ್ದು, ಇದನ್ನು ಅವರ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.ಇದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಸದಸ್ಯ ನಂದಕುಮಾರ್ ಇವರುಗಳು ಕುಂಡಾಮೇಸ್ತ್ರಿ ಯೋಜನೆಯ ಕೆಲಸ ನಿರ್ವಹಿಸುವಾಗ ಗ್ರಾಮ ಪಂಚಾಯಿತಿಗೆ ಸೇರಿದ ಮಣ್ಣು ರಸ್ತೆಯಲ್ಲಿ ಕೆಲಸ ನಿರ್ವಹಿಸಿ ಈ ಅವಾಂತರಕ್ಕೆ ಕಾರಣವಾಗಿದೆ. ಈ ರಸ್ತೆ ನಗರಸಭೆಯ ಅಧೀನದಲ್ಲಿಲ್ಲ. ಆದರೂ ಕೂಡ ಗ್ರಾಮದ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಯವರೊಂದಿಗೆ ಸಮಾಲೋಚಿಸಿ ಈ ರಸ್ತೆಯ ದುರಸ್ತಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವದು ಎಂದು ತಿಳಿಸಿದರು.