ಮಡಿಕೇರಿ, ಜ. 19: ದೇಶದ ರಕ್ಷಣಾ ಪಡೆಯ ಏಕೈಕ ಮಹಾದಂಡನಾಯಕ (ಕಮಾಂಡರ್ ಇನ್ ಚೀಫ್) ಹೆಗ್ಗಳಿಕೆಯ ಕೊಡಗಿನ ಸೇನಾಧಿಕಾರಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನಾಚರಣೆಯನ್ನು ಸರಕಾರ ಪ್ರಸಕ್ತ ವರ್ಷ ಲಘುವಾಗಿ ಪರಿಗಣಿಸಿದಂತಿದೆ. ಇದೇ ತಾ. 28ರಂದು ಫೀ.ಮಾ. ಕಾರ್ಯಪ್ಪ ಅವರ ಜನ್ಮದಿನಾಚರಣೆ ನಡೆಯಬೇಕಿದ್ದು, ಈ ಬಗ್ಗೆ ಇಲ್ಲಿಯವರೆಗೆ ಯಾವದೇ ಚರ್ಚೆ - ಪ್ರಸ್ತಾಪಗಳು ಕಂಡುಬಂದಿಲ್ಲ. ಇನ್ನು ಕೇವಲ 8 ದಿನಗಳು ಮಾತ್ರ ಬಾಕಿ ಇದ್ದು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಯಾವ ಸಿದ್ಧತೆಗಳೂ ನಡೆದಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.
ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಹಿರಿಯ ಸೇನಾಧಿಕಾರಿಗಳು ಹಾಗೂ ಇತರ ಪ್ರಮುಖರು ಸೇರಿ ಪ್ರಾರಂಭಿಸಿರುವ ಫೀ.ಮಾ. ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನ ವತಿಯಿಂದ ಜಿಲ್ಲೆಯಲ್ಲಿ ದೇಶದ ರಕ್ಷಣಾ ಪಡೆಯ ಪ್ರಥಮ ದಂಡನಾಯಕ ಖ್ಯಾತಿಯ ಕಾರ್ಯಪ್ಪ ಅವರ ಜನ್ಮದಿನಾಚರಣೆಯನ್ನು ಆಚರಿಸುವಂತಾಗಿತ್ತು. ಪ್ರಥಮ ವರ್ಷ ನಗರದಲ್ಲಿರುವ ಕಾರ್ಯಪ್ಪ ಅವರ ಪ್ರತಿಮೆಗೆ ಸೇನಾ ಹೆಲಿಕಾಫ್ಟರ್‍ನ ಮೂಲಕ ಆಗಸದಿಂದ ಹೂಮಳೆ ಸುರಿಸುವದರೊಂದಿಗೆ ಶಿಸ್ತಿನ ಸೇನಾನಿಯ ಜನ್ಮದಿನಾಚರಣೆ ಕಾರ್ಯಕ್ರಮ ಜಿಲ್ಲೆಯಲ್ಲಿ ಆರಂಭಗೊಂಡಿತ್ತು. ನಂತರದ ವರ್ಷಗಳಲ್ಲಿ ಇದನ್ನು ರಾಜ್ಯ ಸರಕಾರದಿಂದ ಸರಕಾರಿ ಕಾರ್ಯಕ್ರಮವಾಗಿ ಪರಿಗಣಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ಆಚರಿಸುವ ಕ್ರಮ ನಡೆದುಕೊಂಡು ಬರುತ್ತಿದೆ. ಆದರೆ ಪ್ರಸಕ್ತ ವರ್ಷ ಜನವರಿ 20ರ ದಿನಾಂಕ ಬಂದರೂ ಸರಕಾರ ಅಥವಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಈ ಬಗ್ಗೆ ಯಾವದೇ ಪ್ರಸ್ತಾಪ ಕಂಡುಬಂದಿಲ್ಲ ಎಂದು ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಅವರು ಆಕ್ಷೇಪಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಿಂದ ಮಾಹಿತಿ ಬಯಸಿದಾಗ, ಇಲಾಖೆಯಿಂದ ಈ ಬಗ್ಗೆ ಇನ್ನೂ ಸೂಚನೆ ಬಂದಿಲ್ಲ. ಆದರೆ ಇತ್ತೀಚೆಗೆ ಇಲಾಖೆಗೆ ಈ ಕುರಿತು ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ವಿವಿಧ ದಿನಾಚರಣೆಗಳಿಗೆ ಸಂಬಂಧಿಸಿದಂತೆ ಸರಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ಕ್ರಿಯಾಯೋಜನೆ ರೂಪಿಸಿ ಅನುದಾನವನ್ನು ಒದಗಿಸುತ್ತದೆ. ಆದರೆ ‘ಶಕ್ತಿ’ಗೆ ಕೆಲವು ಮೂಲಗಳಿಂದ ತಿಳಿದು ಬಂದಂತೆ ಈ ಬಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕ್ರಿಯಾಯೋಜನೆಯಲ್ಲಿ ಫೀ.ಮಾ. ಕಾರ್ಯಪ್ಪ ಜನ್ಮ ದಿನಾಚರಣೆಯ ಪ್ರಸ್ತಾಪವೇ ಇಲ್ಲವೆನ್ನಲಾಗಿದೆ.
ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಸರಕಾರಿ ಕಾರ್ಯಕ್ರಮವಾಗಿ ರೂಪುಗೊಂಡು ಇದೀಗ ಐದು ವರ್ಷಗಳು ಸಂದಿವೆ. ಆರಂಭದ ವರ್ಷ ಸರಕಾರ ರೂ. 80 ಸಾವಿರ ಹಾಗೂ ನಂತರದ ವರ್ಷಗಳಲ್ಲಿ ತಲಾ ರೂ. 3 ಲಕ್ಷ ಅನುದಾನ ನೀಡಿದ್ದು, ಕಳೆದ ವರ್ಷ ಇದಕ್ಕಾಗಿ ರೂ. 10 ಲಕ್ಷವನ್ನು ಮೀಸಲಿರಿಸಿತ್ತು. ಈ ಅನುದಾನವನ್ನು ಬಳಸಿಕೊಂಡು ಫೀ.ಮಾ. ಕಾರ್ಯಪ್ಪ ಅವರ ಜನ್ಮ ದಿನಾಚರಣೆಯೊಂದಿಗೆ ಮಾರ್ಚ್ 31 ರಂದು ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರ ಜನ್ಮದಿನವನ್ನೂ ಆಚರಿಸಿಕೊಂಡು ಬರಲಾಗುತಿತ್ತು. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿನ ಆರ್ಮಿ ಪೆರೇಡ್ ಗ್ರೌಂಡ್‍ಗೆ ಸೇನೆ ಕಾರ್ಯಪ್ಪ ಅವರ ಹೆಸರನ್ನು ನಾಮಕರಣ ಮಾಡಿದೆ. ಅಲ್ಲದೆ ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿದ ದಿನವನ್ನು ದೇಶದ ರಕ್ಷಣಾ ಪಡೆಯಲ್ಲಿ ‘ಆರ್ಮಿ ಡೇ’ ಎಂದು ಆಚರಿಸಿಕೊಂಡು ಬರಲಾಗುತ್ತಿದೆ.
ಆದರೆ ಅವರ ತವರು ಜಿಲ್ಲೆಯಲ್ಲಿ ಯುವ ಪೀಳಿಗೆಗೆ ಪ್ರೇರಣೆಯಾಗುವಂತೆ ಶಿಸ್ತಿನ ಸೇನಾನಿಯ ಜನ್ಮದಿನಾಚರಣೆಯ ವಿಚಾರದಲ್ಲಿ ತಾತ್ಸಾರ ಮನೋಭಾವವನ್ನು ಸರಕಾರ ಜಿಲ್ಲಾಡಳಿತ ತೋರುತ್ತಿರುವದಾಗಿ ಕರ್ನಲ್ ಸುಬ್ಬಯ್ಯ ಆಕ್ಷೇಪಿಸಿದ್ದಾರೆ.