ಗೋಣಿಕೊಪ್ಪ ವರದಿ, ಜ. 19 : ವರ್ತಕರಿಂದ ಗೋಣಿಕೊಪ್ಪದಲ್ಲಿ ಏಕಮುಖ ಸಂಚಾರ ನಿಯಮದ ವಿಚಾರದಲ್ಲಿ ನಡೆಯುತ್ತಿರುವ ಪರ-ವಿರೋಧ ಗೊಂದಲಕ್ಕೆ ತೆರೆ ಎಳೆಯಲು ಜಿಲ್ಲಾ ಪಂಚಾಯಿತಿ ಸದಸ್ಯ ಸಿ. ಕೆ. ಬೋಪಣ್ಣ ನೇತೃತ್ವದಲ್ಲಿ ವರ್ತಕರು ಹಾಗೂ ಸಾರ್ವಜನಿಕರ ಪರವಾಗಿ ಒಂದೇ ವೇದಿಕೆಯಲ್ಲಿ ಪ್ರಯತ್ನಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳುವ ನಿರ್ಧಾರವನ್ನು ಗೋಣಿಕೊಪ್ಪ ಪ್ರೆಸ್‍ಕ್ಲಬ್ ವತಿಯಿಂದ ಆಯೋಜಿಸಿದ್ದ ಮುಕ್ತ ಮುಕ್ತ ಕಾರ್ಯಕ್ರಮದಲ್ಲಿ ನಿರ್ಧರಿಸಲಾಯಿತು.
ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಾಡ್ಯಮಾಡ ಸುನಿಲ್ ಮಾದಪ್ಪ, ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಸಿ. ಕೆ. ಬೋಪಣ್ಣ, ಏಕಮುಖ ಸಂಚಾರ ನಿಯಮದಿಂದಾಗುವ ತೊಂದರೆಗಳ ಬಗ್ಗೆ ವರ್ತಕರ ಪರವಾಗಿ ಧ್ವನಿ ಎತ್ತಿರುವ ಹಿರಿಯ ವರ್ತಕ ಮಚ್ಚಮಾಡ ಅನೀಶ್ ಮಾದಪ್ಪ ಅವರುಗಳು ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಪರ್ಯಾಯ ಪ್ರಯೋಗಿಕ ನಿಯಮ ಅನುಷ್ಠಾನಕ್ಕೆ ಒತ್ತಾಯಿಸುವ ನಿರ್ಧಾರವನ್ನು ಪ್ರಕಟಿಸಿದರು. ಆ ಮೂಲಕ ಕಳೆದ 18 ದಿನಗಳಿಂದ ಸಂಚಾರ ವಿಚಾರದಲ್ಲಿ ನಡೆದ ಪರ-ವಿರೋಧದ ಚರ್ಚೆ ಒಂದೇ ವೇದಿಕೆಯಡೀ ಮುಂದುವರಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಂತಾಗಿದೆ. ವರ್ತಕರೊಂದಿಗೆ ಸಾರ್ವಜನಿಕ ಅಭಿಪ್ರಾಯ ಕೂಡ ಮುಖ್ಯವಾಗಿದೆ. ಎಲ್ಲ್ಲರಿಗೆ ಅನುಕೂಲವಾಗುವಂತ ಸಂಚಾರಿ ನಿಯಮ ಪಾಲಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಗೋಣಿಕೊಪ್ಪ ಪಟ್ಟಣದ ಮುಖ್ಯರಸ್ತೆಯಲ್ಲಿನ ಏಕಮುಖ ಸಂಚಾರ ನಿಯಮದ ಪರ- ವಿರೋಧ ವ್ಯಕ್ತಗೊಂಡ ಗೊಂದಲ ನಿವಾರಣೆಗೆ ಒಂದೇ ಕೂಗಿನಲ್ಲಿ ಜಿಲ್ಲಾಡಳಿತದೊಂದಿಗೆ ವ್ಯವಹರಿಸುವ ಪ್ರಯತ್ನ ನಡೆಸಲು ಪರ-ವಿರೋಧದ ವರ್ತಕರು ಸಮ್ಮತಿ ಸೂಚಿಸಿದರು. ಈ ವಿಚಾರದಲ್ಲಿ ತಾ.28 ರಂದು ಪೊಲೀಸ್ ಇಲಾಖೆ ವತಿಯಿಂದ ಗೋಣಿಕೊಪ್ಪದಲ್ಲಿ ಆಯೋಜಿಸಲು ಉದ್ದೇಶಿಸಿರುವ ಸಾರ್ವಜನಿಕರ ಸಭೆಗೂ ಮುನ್ನ ಪರಿಹಾರ ಕಂಡುಕೊಳ್ಳಬೇಕಿದೆ. ಅನವಶ್ಯಕ ಗೊಂದಲದಿಂದಾಗುವ ಅಶಾಂತಿ ತಪ್ಪಿಸಲು ಕಾರ್ಯಪ್ರವೃತ್ತರಾಗಬೇಕಿದೆ. ಈ ನಿಟ್ಟಿನಲ್ಲಿ ಶೀಘ್ರವಾಗಿ ಸಿ.ಕೆ. ಬೋಪಣ್ಣ ನೇತೃತ್ವದಲ್ಲಿ ಸಾಮಾಜಿಕ ಕಳಕಳಿ ಹೊತ್ತ ವರ್ತಕರುಗಳು ನಿಯೋಗದ ಮೂಲಕ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಳ್ಳಲು ನಿರ್ಧರಿಸಲಾಯಿತು.
ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಾಡ್ಯಮಾಡ ಸುನಿಲ್ ಮಾದಪ್ಪ, ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಸಿ. ಕೆ. ಬೋಪಣ್ಣ, ಏಕಮುಖ ಸಂಚಾರ ನಿಯಮದಿಂದಾಗುವ ತೊಂದರೆಗಳ ಬಗ್ಗೆ ವರ್ತಕರ ಪರವಾಗಿ ಧ್ವನಿ ಎತ್ತಿರುವ ಹಿರಿಯ ವರ್ತಕ ಮಚ್ಚಮಾಡ ಅನೀಶ್ ಮಾದಪ್ಪ ಅವರುಗಳು ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಪರ್ಯಾಯ ಪ್ರಾಯೋಗಿಕ ನಿಯಮ ಅನುಷ್ಠಾನಕ್ಕೆ ಒತ್ತಾಯಿಸುವ ನಿರ್ಧಾರವನ್ನು ಪ್ರಕಟಿಸಿದರು. ಆ ಮೂಲಕ ಕಳೆದ 18 ದಿನಗಳಿಂದ ಸಂಚಾರ ವಿಚಾರದಲ್ಲಿ ನಡೆದ ಪರ-ವಿರೋಧದ ಚರ್ಚೆ ಒಂದೇ ವೇದಿಕೆಯಡೀ ಮುಂದುವರಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಂತಾಯಿತು.
ಪ್ರಾಯೋಗಿಕವಾಗಿ ಪ್ರಸ್ತುತ ಮೈಸೂರು ರಸ್ತೆಯಿಂದ ಪಟ್ಟಣಕ್ಕೆ ಬರುವ ವಾಹನಗಳನ್ನು ಬೈಪಾಸ್ ಮೂಲಕ ಪ್ರವೇಶ ಮಾಡುವಂತೆ ಅನುಷ್ಠಾನಗೊಳಿಸಿರುವ ನಿಯಮದ ಬದಲಾಗಿ ಮೈಸೂರು ರಸ್ತೆಯಿಂದ ಬರುವ ವಾಹನಗಳನ್ನು ನೇರವಾಗಿ ಪಟ್ಟಣಕ್ಕೆ ಬರುವಂತೆ, ವೀರಾಜಪೇಟೆ ರಸ್ತೆ ಕಡೆಯಿಂದ ಬರುವ ವಾಹನವನ್ನು ಬೈಪಾಸ್ ಮೂಲಕ ಹಾದು ಹೋಗುವಂತೆ, ಬೈಪಾಸ್ ರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಪೊಲೀಸ್ ವರಿಷ್ಠಾಧಿಕಾರಿ ಅವರಲ್ಲಿ ಮನವಿ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದರು.
ಬೈಪಾಸ್ ರಸ್ತೆ ವಿಸ್ತರಣೆ ಕಾಮಗಾರಿ ಮುಂದಿನ ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ಮತ್ತಷ್ಟು ಸಮಸ್ಯೆ ಪರಿಹಾರ ಕಾಣಲಿದೆ ಎಂದು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಹೇಳಿದರು. ಮುಖ್ಯರಸ್ತೆ ಅಗಲೀಕರಣಕ್ಕೆ ಕಟ್ಟಡ ತೆರವು ಕಾರ್ಯ ಕೂಡ ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳುವ ಮೂಲಕ ವಾಹನ ನಿಲುಗಡೆ ಸಮಸ್ಯೆ ಪರಿಹಾರಕ್ಕೆ ಅವಕಾಶವಿದೆ. ಏಕಮುಖ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸಿದಾಗ ಅಗಲೀಕರಣಕ್ಕೆ ಮುಂದಾಗಬೇಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವರ್ತಕರು ಮಾತ್ರವಲ್ಲದೆ ಸಾರ್ವಜನಿಕರ ಅಭಿಪ್ರಾಯ ಕೂಡ ಮುಖ್ಯವಾಗಿದೆ. ಶೇ. 80 ರಷ್ಟು ಸಾರ್ವಜನಿಕರು ನಿಯಮಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಮಸ್ಯೆಗೆ ಕಾರಣಗಳು
ವಾಹನ ದಟ್ಟಣೆ, ನಿಲುಗಡೆ ಸಮಸ್ಯೆ ಉಲ್ಬಣಕ್ಕೆ ಮುಖ್ಯರಸ್ತೆಯ ಎರಡು ಬದಿಗಳಲ್ಲಿ 18 ಮೀಟರ್ ಕಟ್ಟಡ ತೆರವು ಮಾಡದಿರುವದೇ ಕಾರಣವಾಯಿತು ಎಂದು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಹೇಳಿದರು. ಲೋಕೋಪಯೋಗಿ ನಿಯಮದ ಪ್ರಕಾರ ಇಷ್ಟು ವಿಸ್ತೀರ್ಣವನ್ನು ವರ್ತಕರು ತಮ್ಮ ಕಟ್ಟಡಗಳನ್ನು ತೆರವುಗೊಳಿಸಲು ಸೂಚಿಸಿದ್ದರೂ ಸರಿಯಾದ ಸ್ಪಂದನ ವ್ಯಕ್ತವಾಗಲಿಲ್ಲ. ಇದರಿಂದಾಗಿ ಏಕಮುಖ ಸಂಚಾರ ಅನುಷ್ಠಾನ ಅನಿವಾರ್ಯವಾಗಿದೆ. ಏಕಮುಖ ಸಂಚಾರ ಬೇಡ ಎಂದಾದರೆ, ಕಟ್ಟಡ ತೆರವಿಗೆ ಲೋಕೋಪಯೋಗಿ ಇಲಾಖೆಯನ್ನು ಒತ್ತಾಯಿಸಬೇಕಿದೆ ಎಂದು ಅವರು ಹೇಳಿದರು.
ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಾಡ್ಯಮಾಡ ಸುನಿಲ್ ಮಾದಪ್ಪ ಮಾತನಾಡಿ, ಸಂಘದ ಮಹಾಸಭೆಯಲ್ಲಿ ಏಕಮುಖ ಸಂಚಾರ ವಿಚಾರದಲ್ಲಿ ಚರ್ಚೆ ನಡೆಸಿ, ಅನುಷ್ಠಾನಕ್ಕೆ ಒತ್ತಾಯಿಸಲು ನಿರ್ಧರಿಸಲಾಗಿತ್ತು. ಆದರೆ, ಎಲ್ಲಾ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳದಿರುವದೇ ಮಾಹಿತಿ ಕೊರತೆಗೆ ಕಾರಣವಾಗಿದೆ. ವ್ಯಾಪಾರಕ್ಕೆ ತೊಂದರೆ ಎಂಬ ಕಾರಣಕ್ಕೆ ನಾವು ಏಕಮುಖ ಸಂಚಾರ ರದ್ದು ಪಡಿಸುವಂತೆ ಒತ್ತಾಯಿಸಲಾಗಿತ್ತು. ನಾವು ವರ್ತಕರ ಪರವಾಗಿ ಮುಂದುವರಿದಿದ್ದೇವೆ. ಶೀಘ್ರವಾಗಿ ವರ್ತಕ ಸದಸ್ಯರ ಸಭೆ ನಡೆಸಲಾಗುತ್ತಿದ್ದು, ಈ ಸಭೆಗೆ ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಕೆ. ಬೋಪಣ್ಣ ಅವರನ್ನು ಆಹ್ವಾನಿಸಿ ನಮ್ಮಲ್ಲಿನ ಗೊಂದಲ ನಿವಾರಣೆಗೆ ಕ್ರಮಕೈಗೊಳ್ಳಲಾಗುವದು ಎಂದರು.
ಹಿರಿಯ ವರ್ತಕ ಅನೀಶ್ ಮಾದಪ್ಪ ಮಾತನಾಡಿ, ವರ್ತಕರುಗಳು, ಪಾದಚಾರಿಗಳು ನಡೆದಾಡುವ ಜಾಗದಲ್ಲೂ ವ್ಯಾಪಾರ ವಸ್ತುಗಳನ್ನು ಇಟ್ಟಿರುವದರಿಂದ ಹಾಗೂ ವರ್ತಕರು ತಮ್ಮ ತಮ್ಮ ವ್ಯಾಪಾರ ಕೇಂದ್ರದ ಎದುರಿನ ಮುಖ್ಯರಸ್ತೆಯಲ್ಲಿ ನಾಲ್ಕುಚಕ್ರದ ವಾಹನ ನಿಲುಗಡೆ ಮಾಡುವದರಿಂದ ವಾಹನ ದಟ್ಟಣೆ ಹೆಚ್ಚಾಗಲು ಕಾರಣವಾಗಿರುವ ಬಗ್ಗೆ ನಮಗೆ ಸ್ಪಷ್ಟತೆ ದೊರೆತಿದೆ. ಇದರಿಂದಾಗುತ್ತಿರುವ ಸಮಸ್ಯೆ ಮನವರಿಕೆಯಾಗಿರುವದರಿಂದ ಇಂತಹ ಸಮಸ್ಯೆ ಮುಂದುವರಿಯದಂತೆ ವರ್ತಕರು ಜವಬ್ದಾರಿ ಹೊತ್ತುಕೊಂಡಿದ್ದಾರೆ ಎಂದರು.
ಕೇಳಿ ಬಂದ ಒತ್ತಾಯಗಳು
ಸ್ಥಳೀಯ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಸಂದರ್ಭ ಕಡ್ಡಾಯವಾಗಿ ಪಾರ್ಕಿಂಗ್ ವ್ಯವಸ್ಥೆ ಇರುವ ಕಟ್ಟಡಗಳಿಗೆ ಮಾತ್ರ ಅನುಮತಿ ನೀಡಬೇಕು.
ಪಟ್ಟಣದ ಅಡ್ಡರಸ್ತೆ, ಬೈಪಾಸ್ ಸೇರಿದ ರಸ್ತೆಗಳಲ್ಲಿ ಪಾದಚಾರಿಗಳು ನಡೆದಾಡಲು ಹಾಗೂ ಸಮರ್ಪಕ ವಾಹನ ಚಾಲನೆಗೆ ಅವಕಾಶ ಮಾಡಿಕೊಡಬೇಕು.
ಮೂಲಭೂತ ವ್ಯವಸ್ಥೆಯೊಂದಿಗೆ ಪೊಲೀಸ್ ಇಲಾಖೆ ಯೋಜನೆ ಅನುಷ್ಠಾನಗೊಳಿಸಬೇಕು. ಅಗತ್ಯ ಸಿಬ್ಬಂದಿ ನೇಮಕ, ಟ್ರಾಫಿಕ್ ಸಿಗ್ನಲ್ ಲೈಟ್ ಇವುಗಳಿಗೆ ಯೋಜನೆ ರೂಪಿಸಬೇಕು.
ರಸ್ತೆ ಬದಿಗಳಲ್ಲಿ ವರ್ತಕರುಗಳು ಇಟ್ಟುಕೊಂಡಿರುವ ಖಾಸಗಿ ಬ್ಯಾರಿಕೇಡ್ ತೆರವುಗೊಳಿಸಿ ಪಾದಚಾರಿ, ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು.
ಒಂದು ವೇಳೆ ಏಕಮುಖ ನಿಯಮ ಅನುಷ್ಠಾನ ತೆರವುಗೊಳಿಸಿದ್ದಲ್ಲಿ ಕಡ್ಡಾಯವಾಗಿ ವಾಹನ ನಿಲುಗಡೆಗೆ ಪೈಂಟಿಂಗ್ ಮೂಲಕ ಅವಕಾಶ ನೀಡಬೇಕು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರ. ಕಾರ್ಯದರ್ಶಿ ಹೆಚ್. ಕೆ. ಜಗದೀಶ್, ಸಾರ್ವಜನಿಕ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಮುಕ್ತ ಕಾರ್ಯಕ್ರಮ ನಡೆಸಲಾಗುತ್ತಿದೆ. ಆಡಳಿತ ವ್ಯವಸ್ಥೆಯನ್ನು ಚುರುಕು ಮುಟ್ಟಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಅಜ್ಜಮಾಡ ಕುಶಾಲಪ್ಪ ಪ್ರಾರ್ಥಿಸಿದರು. ಮಂಡೇಡ ಅಶೋಕ್ ಸ್ವಾಗತಿಸಿದರು. ಹೆಚ್. ಜೆ. ರಾಕೇಶ್ ವಂದಿಸಿದರು. ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು. -ಸುದ್ದಿಪುತ್ರ