ಗೋಣಿಕೊಪ್ಪಲು, ಜ. 19: ಕೊಡಗು ಜಿಲ್ಲಾ ಪ್ರವಾಸಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಮಡಿಕೇರಿಯ ಹೊಟೇಲ್ ಚಾಯ್ಸ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಕುಳಿಕಂಡ ಸಂಪತ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೊಡಗಿನಲ್ಲಿರುವ ಪ್ರವಾಸಿ ವಾಹನ ಮಾಲೀಕರ ಹಾಗೂ ಚಾಲಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಸಮಸ್ಯೆಗಳ ಬಗ್ಗೆ ಈಗಾಗಲೇ ಜಿಲ್ಲಾಡಳಿತ,ಸಾರಿಗೆ ಇಲಾಖೆ,ಹಾಗೂ ಸರ್ಕಾರಕ್ಕೆ ನೀಡಿದಂತಹ ಮನವಿ ಪತ್ರಗಳಿಗೆ ಸ್ಪಂಧನೆ ದೊರಕದ ಬಗ್ಗೆ ಸದಸ್ಯರುಗಳು ತಮ್ಮ ನೋವನ್ನು ತೋಡಿಕೊಂಡರು ಮತ್ತೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುವ ಮೂಲಕ ನ್ಯಾಯ ಪಡೆದುಕೊಳ್ಳುವಂತೆ ಸಭೆ ತೀರ್ಮಾನ ಕೈಗೊಂಡಿತು.

ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ, ಗಸ್ತು ವ್ಯವಸ್ಥೆ ನೆರೆ ರಾಜ್ಯದ ವಾಹನಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಯಿತು.ಕೊಡಗಿನ ಗಡಿ ಭಾಗವಾದ ಪೆರುಂಬಾಡಿ, ಕುಟ್ಟ, ಕರಿಕೆ, ಹಾಗೂ ಸಂಪಾಜೆ ಗೇಟ್‍ಗಳಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ತಪಾಸಣಾ ಕೇಂದ್ರಗಳನ್ನು ಕಡ್ಡಾಯಗೊಳಿಸುವದು, ಅಂತರ ರಾಜ್ಯಗಳಾದ ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಬೇಕಾದರೆ ನಮ್ಮ ರಾಜ್ಯದ ತೆರಿಗೆಗಿಂತ ಮೂರು ಪಟ್ಟು ತೆರಿಗೆ ಪಾವತಿಸುತ್ತಿರುವದನ್ನು ನಿಲ್ಲಬೇಕು.

ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಕ್ಸಿ ಸ್ಟ್ಯಾಂಡ್‍ಗಳಿಗೆ ನಾಮಫಲಕ ಅಳವಡಿಸುವದು ಹಾಗೂ ಇಂತಹ ವಾಹನಗಳಿಗೆ ಮಾತ್ರ ನಿಲ್ದಾಣ ಮೀಸಲು ಎಂದು ಕಡ್ಡಾಯ ಮಾಡುವದು ಶಬರಿಮಲೆ ಯಾತ್ರೆಯ ಸಂದರ್ಭ ಕರ್ನಾಟಕದಿಂದ ಕೇರಳಕ್ಕೆ ಪ್ರವೇಶ ಮಾಡುವಾಗ ಯಾವದೇ ವಿನಾಯಿತಿ ನೀಡದೆ ಕೇರಳ ರಾಜ್ಯದ ಪೊಲೀಸರು ಕರ್ನಾಟಕ ವಾಹನಗಳ ಮೇಲೆ ಹೆಚ್ಚಿನ ತೆರಿಗೆ ಸಂಗ್ರಹಿಸುವದು ನಿಲ್ಲಬೇಕು.

ನಿಗದಿತ ನಿಲ್ದಾಣದಲ್ಲಿ ನಿಲ್ಲುವ ಬಿಳಿ ಬೋರ್ಡ್‍ನ ವಾಹನಗಳ ಮೇಲೆ ಆರ್.ಟಿ.ಓ. ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಬಳಿಕ ಬೇಡಿಕೆಗಳ ಮನವಿಯನ್ನು ಮಡಿಕೇರಿಯ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಯಿತು.

ಈ ಸಂದರ್ಭ ಪ್ರವಾಸಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಉಪಾಧ್ಯಕ್ಷ ಎಂ.ಎ. ರಫೀಕ್, ಕಾರ್ಯದರ್ಶಿ ಪಿ.ಸಿ. ರಾಜು ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.