*ಗೋಣಿಕೊಪ್ಪಲು, ಜ. 19: ಅಮ್ಮತ್ತಿ ಮಿಲನ್ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಹತ್ತನೇ ವರ್ಷದ ರಾಜ್ಯ ಮಟ್ಟದ 7 ಜನರ ತಂಡದ ಮಿಲನ್ ಬಾಯ್ಸ್ ಕಾಲ್ಚೆಂಡು ಪಂದ್ಯಾಟಕ್ಕೆ ಅದ್ಧೂರಿ ಚಾಲನೆ ದೊರೆಯಿತು.
ಅಮ್ಮತ್ತಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರೀಡಾ ಉತ್ಸವಕ್ಕೆ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಫುಟ್‍ಬಾಲ್ ಕ್ರೀಡೆಯ ಅಸ್ತಿತ್ವವನ್ನು ಜಿಲ್ಲೆಯಲ್ಲಿ ಉಳಿಕೊಳ್ಳಲು ಸಂಘ ಸಂಸ್ಥೆಗಳು ಕ್ರೀಡಾ ಕೂಟಗಳನ್ನು ಆಯೋಜಿಸುವ ಮೂಲಕ ಸಾಧ್ಯವಾಗುತ್ತದೆ. ಅಮ್ಮತ್ತಿ ಮಿಲನ್ಸ್ ಬಾಯ್ಸ್ ತಂಡ ಈ ಕಾರ್ಯದಲ್ಲಿ ತೊಡಗಿಸಿಕೊಂಡು ಹಲವು ವರ್ಷಗಳಿಂದ ಕ್ರೀಡಾ ಉತ್ಸವ ನಡೆಸುತ್ತ ಯುವ ಕ್ರೀಡಾಪಟ್ಟುಗಳನ್ನು ಗುರುತಿಸುವ ಕಾರ್ಯ ಮಾಡುತ್ತಿರು ವದು ಶ್ಲಾಘನೀಯ ಎಂದರು.
ಎರಡು ದಿನಗಳು ನಡೆಯುವ ರಾಜ್ಯ ಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ಸುಮಾರು 14ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದ್ದು ಫುಟ್ಬಾಲ್ ಕ್ರೀಡಾ ಪ್ರೇಮಿಗಳ ಮನತಣಿಸಲಿದೆ ಎಂದು ಹೇಳಿದರು.
ಎರಡು ದಿನ ನಡೆಯುವ ಪಂದ್ಯಾಟದಲ್ಲಿ ಅಮ್ಮತ್ತಿ ಭಜರಂಗಿ, ಪಾಲಿಬೆಟ್ಟ ಅಂಬೇಡ್ಕರ್, ನೆಹರು ಎಫ್ ಸಿ, ಮೂರ್ನಾಡು ಹರ್ಷ ಎಫ್ ಸಿ, ಒಂಟಿಯಂಗಡಿ ಸಿ.ವೈ.ಸಿ, ಮರಗೋಡು ಬಿ ವೈಷ್ಣವಿ, ಕುಂದಾ ಬಿ.ಎಸ್.ಎ, ಹಾಲುಗುಂದ ಬಿ.ವೈ.ಸಿ, ಮೊದಲ ದಿನದ ಪಂದ್ಯಾಟದಲ್ಲಿ ಭಾಗವಹಿಸಿದವು.
ಎರಡನೇ ದಿನ ಅಮ್ಮತ್ತಿ ಅಂಬೇಡ್ಕರ್, ಹಾಸನದ ವೈಸಳಾ ಎಫ್.ಸಿ, ಮರಗೋಡು ಎ. ವೈಷ್ಣವಿ, ಗೋಣಿಕೊಪ್ಪ ರೈಡರ್ಸ್ ಎಫ್.ಸಿ, ಅಮ್ಮತ್ತಿ ಮಿಲನ್, ಚೆಟ್ಟಳ್ಳಿ ಕೆ.ಕೆ. ಎಫ್.ಸಿ, ಕೇರಳದ ಉಲಿಕಲ್ ಎಫ್.ಸಿ, ಪಾಲಿಬೆಟ್ಟ ಯುನೈಟೆಡ್ ಎಫ್.ಸಿ ತಂಡಗಳು ಭಾಗವಹಿಸಲಿವೆ.
ಮೊದಲ ಪಂದ್ಯಾಟ ಅಮ್ಮತ್ತಿಯ ಭಜರಂಗಿ ತಂಡ ಹಾಗೂ ಪಾಲಿಬೆಟ್ಟದ ಅಂಬೇಡ್ಕರ್ ತಂಡಗಳ ನಡುವೆ ನಡೆಯಿತು. ಪಂದ್ಯಾಟಕ್ಕೆ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಕಾಲ್ಚೆಂಡು ತಳ್ಳುವ ಮೂಲಕ ಅಥಿತಿಗಳಾದ ಕಾರ್ಮಾಡ್ ಗ್ರಾ.ಪಂ. ಸದಸ್ಯ ಮುಕ್ಕಟೀರ ಸಂತೋಷ್, ಉದ್ಯಮಿ ಕೆ.ಎಂ ಹಂಸ, ಸಿ.ಕೆ. ಜೆಲೀಲ್, ಅಮ್ಮತ್ತಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಪುಲಿಯಂಡ ಲೀಲಾವತಿ, ಮಿಲನ್ ಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ವಿ.ಎಸ್. ಚಂದ್ರ, ಮುಖ್ಯೋಪಾಧ್ಯಾಯಿನಿ ಸೋಮಕ್ಕ, ಕ್ರೀಡಾಕೂಟ ಸಂಚಾಲಕ ಲಿಜೇಶ್ ಅವರುಗಳ ಸಮ್ಮುಖದಲ್ಲಿ ಚಾಲನೆ ನೀಡಿದರು.
ಈ ಸಂದರ್ಭ ಮಿಲನ್ ಬಾಯ್ಸ್ ಯೂತ್ ಕ್ಲಬ್ ಉಪಾಧ್ಯಕ್ಷ ಹೆಚ್.ಡಿ. ಕುಮಾರ್, ಕಾರ್ಯದರ್ಶಿ ನಾಸೀರ್, ಖಜಾಂಚಿ ಕೆ.ಎಸ್. ಸುಜೀತ್, ಪಂದ್ಯಾಟದ ಸಮಿತಿ ಸದಸ್ಯರುಗಳಾದ ಸಬಾಸ್ಟೀನ್, ಎಂ.ಎಂ. ವಿನು, ಸಿರಾಜ್ ಹಾಜರಿದ್ದರು.
ಅಮ್ಮತ್ತಿ ಮಿಲನ್ ಬಾಯ್ಸ್ ಯುತ್ ಕ್ಲಬ್ ವತಿಯಿಂದ ಇತ್ತೀಚೆಗೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ನಿರಾಶ್ರಿತರಿಗೆ ತಮ್ಮ ಶಕ್ತಿ ಅನುಸಾರವಾಗಿ ಧನ ಸಹಾಯ ನೀಡಿ ಸರ್ವ ಸದಸ್ಯರು ಮಾನವಿಯತೆ ಮೆರೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ವಿ.ಎಸ್. ಚಂದ್ರ ಅಧ್ಯಕ್ಷರಾಗಿ ಸಂಸ್ಥೆಯ ನೇತೃತ್ವ ವಹಿಸಿದ್ದಾರೆ.
ಇಂದಿನ ಪಂದ್ಯಾಟ
ಬೆಳಿಗ್ಗೆ 11ಕ್ಕೆ ಅಮ್ಮತ್ತಿ ಅಂಬೇಡ್ಕರ್ ತಂಡ ಮತ್ತು ಹಾಸನ ವೈಸಲಾ ತಂಡ, 11.30ಕ್ಕೆ ಮರಗೋಡು ವೈಷ್ಣವಿ ಹಾಗೂ ಗೋಣಿಕೊಪ್ಪದ ರೈಡರ್ಸ್ ತಂಡ 12 ಗಂಟೆಗೆ ಅಮ್ಮತ್ತಿ ಮಿಲನ್ಸ್ ಮತ್ತು ಚೆಟ್ಟಳ್ಳಿ ಕೆ.ಕೆ.ಎಫ್.ಸಿ. 12.30ಕ್ಕೆ ಕೇರಳದ ಉಲಿಕಲ್, ಹಾಗೂ ಪಾಲಿಬೆಟ್ಟದ ಯುನೈಟೆಡ್ ತಂಡಗಳ ನಡುವೆ ಪಂದ್ಯಾಟದ ನಂತರ ಅಂತಿಮ ಹಣಾಹಣಿ ನಡೆಯಲಿದೆ.
ವರದಿ: ಎನ್.ಎನ್. ದಿನೇಶ್