ಕುಶಾಲನಗರ, ಜ. 18: ಕುಶಾಲನಗರದ ವಿ.ಎಚ್.ಧನುಷ್ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಬಿಹಾರದ ಪಾಟ್ನದಲ್ಲಿ ತಾ. 20 ರಿಂದ ಪ್ರಾರಂಭವಾಗಲಿರುವ 16 ವರ್ಷದೊಳಗಿನ ಬಾಲಕರ ವಿಭಾಗದ ಕಬಡ್ಡಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಜ್ಞಾನಭಾರತಿ ಪ್ರೌಢಶಾಲೆಯ ವಿ.ಎಚ್.ಧನುಷ್ ಆಯ್ಕೆಯಾಗಿದ್ದಾನೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಆಯ್ಕೆ ನಡೆದಿದ್ದು ಧನುಷ್ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ರಾಜ್ಯದ ತಂಡದೊಂದಿಗೆ ತರಬೇತಿ ಪಡೆದಿದ್ದು ಇದೀಗ ಬಿಹಾರ್‍ಗೆ ತೆರಳಿದ್ದಾನೆ.

ಧನುಷ್ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸದಸ್ಯನಾಗಿದ್ದು, ಕುಶಾಲನಗರ ಮುಳ್ಳುಸೋಗೆ ಗ್ರಾಮದ ಮಾಜಿ ಸೈನಿಕ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ವಿ.ಬಿ.ಹರೀಶ್ ಮತ್ತು ಶಶಿಕಲಾ ದಂಪತಿಯ ಪುತ್ರ.

ತಾ. 20 ರಿಂದ ಆರಂಭವಾಗಲಿರುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಈಗಾಗಲೆ ಕರ್ನಾಟಕ ತಂಡ ಬಿಹಾರಕ್ಕೆ ಪ್ರಯಾಣ ಬೆಳೆಸಿದೆ ಎಂದು ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಬಿ.ಡಿ.ಕಪಿಲ್ ಕುಮಾರ್ ತಿಳಿಸಿದ್ದಾರೆ.