ಮಡಿಕೇರಿ, ಜ. 18: ನರಿಯಂದಡ ಗ್ರಾ.ಪಂ.ಗೆ ಒಳಪಡುವ ಕೋಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 13 ಕಿ.ಮೀ. ರಸ್ತೆ ಹಲವಾರು ವರ್ಷಗಳಿಂದ ತೀರಾ ಹದಗೆಟ್ಟಿದೆ. ಸಾರ್ವಜನಿಕರು ವಾಹನಗಳಲ್ಲಿ ಮಾತ್ರವಲ್ಲದೆ ಕಾಲ್ನಡಿಗೆಯಲ್ಲೂ ಸಂಚರಿಸಲಾಗದ ದುಸ್ಥಿತಿಯಲ್ಲಿದೆ. ಈ ರಸ್ತೆಗಳನ್ನು ಶೀಘ್ರವಾಗಿ ಅಭಿವೃದ್ಧಿ ಪಡಿಸದಿದ್ದಲ್ಲಿ ತಾ. 28 ರಂದು ಮರಂದೋಡ ಮತ್ತು ಕೊಳಕೇರಿ ಮುಖ್ಯ ರಸ್ತೆಯನ್ನು ತಡೆ ಮಾಡುವದಲ್ಲದೆ, ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರಾದ ಚೇನಂಡ ಗಿರೀಶ್ ಪೂಣಚ್ಚ ಮತ್ತಿತರರು, ರಸ್ತೆ ಹದಗೆಟ್ಟ್ಟಿರುವ ಬಗ್ಗೆ ಹಲವಾರು ಬಾರಿ ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆಯಲಾಗಿದ್ದರೂ ಇಲ್ಲಿಯವರೆಗೆ ದುರಸ್ತಿ ಕಾರ್ಯ ನಡೆದಿಲ್ಲ. ಕೋಕೇರಿ-ಕೊಳಕೇರಿ ಗ್ರಾಮದಲ್ಲಿ ಅಂದಾಜು 500 ಕ್ಕೂ ಹೆಚ್ಚು ವಾಹನಗಳಿದ್ದು, ದಿನಂಪ್ರತಿ 200 ಕ್ಕೂ ಹೆಚ್ಚಿನ ವಾಹನಗಳು, ನಾಲ್ಕೈದು ಶಾಲಾ-ಕಾಲೇಜು ಬಸ್ಗಳು ತುಂಬಾ ಕಷ್ಟದಲ್ಲಿ ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ನ್ನು ರಸ್ತೆ ದುಸ್ಥಿತಿಯ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಹದಗೆಟ್ಟ ರಸ್ತೆಯಿಂದಾಗಿ ಗ್ರಾಮದಲ್ಲಿರುವ ಕಾಫಿ ತೋಟಗಳಿಗೆ ಕೂಲಿ ಕಾರ್ಮಿಕರು ಕೂಡ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದ ಬಾವಲಿಯಿಂದ ಕಿಕ್ಕರೆ ಕೋಕೇರಿ ಶಾಲೆಯವರೆಗಿನ 5 ಕಿ.ಮೀ. ರಸ್ತೆ, ಕೋಕೇರಿ ಶಾಲೆಯಿಂದ ಕೊಳಕೇರಿ-ನಾಪೋಕ್ಲು ಸಂಪರ್ಕ ರಸ್ತೆ 6 ಕಿ.ಮೀ. ಮತ್ತು ಕೋಕೇರಿಯಿಂದ ಮರಂದೋಡವನ್ನು ಸಂಪರ್ಕಿಸುವ 2 ಕಿ.ಮೀ. ರಸ್ತೆ ಸಂಪೂರ್ಣವಾಗಿ ಹದಗೆಟ್ಟು ವಾಹನ ಸಂಚರಿಸಲಾಗದ ದುಸ್ಥಿತಿಯಲ್ಲಿದೆ ಎಂದು ವಿವರಿಸಿದರು.
ಈ ರಸ್ತೆ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ತಾ. 28 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮರಂದೋಡ ಮತ್ತು ಕೊಳಕೇರಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆಗಟ್ಟಿ, ಕೋಕೇರಿ ಮತ್ತು ಕೊಳಕೇರಿ ಮಾರ್ಗವಾಗಿ ಕಳುಹಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಮುಂಬರುವ ಎಲ್ಲಾ ಚುನಾವಣೆಗಳನ್ನು ಪಕ್ಷಾತೀತವಾಗಿ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದರು.
ರೂ. 40 ಲಕ್ಷ ನೀರು ಪಾಲು
ಈ ಎರಡು ಗ್ರಾಮಗಳಲ್ಲಿ ಸುಮಾರು 3500 ಮಂದಿ ವಾಸವಿದ್ದು, 2500 ಕ್ಕೂ ಹೆಚ್ಚಿನ ಮತದಾರರಿದ್ದಾರೆ. ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು ರೂ. 40 ಲಕ್ಷ ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು, ಅಗತ್ಯವಿರುವ ಮೋಟಾರನ್ನು ಅಳವಡಿಸಲಾಗಿದೆ. ಆದರೆ, ಜಿ.ಪಂ. ಮತ್ತು ಗ್ರಾ.ಪಂ. ನಡುವಿನ ಸಮನ್ವಯದ ಕೊರತೆಯಿಂದ ಇದುವರೆಗೆ ಒಂದು ಹನಿ ನೀರು ಕೂಡ ಗ್ರಾಮಸ್ಥರಿಗೆ ಲಭ್ಯವಾಗಿಲ್ಲ ಎಂದು ಟೀಕಿಸಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಕುಮ್ಮಂಡ ನಂದಾ ಕಾಳಪ್ಪ, ಮೂಡೇರ ನರೇಂದ್ರ, ಮಚ್ಚಂಡ ಮಂಜು ಚಂಗಪ್ಪ ಹಾಗೂ ಕಿಕ್ಕರೆ ಮುಹಮ್ಮದ್ ಉಪಸ್ಥಿತರಿದ್ದರು.