ಕುಶಾಲನಗರ, ಜ. 18: ಕುಶಾಲನಗರ ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಲುಷಿತ ನೀರು ವಿಲೇವಾರಿಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಹರಸಾಹಸ ಪಡುತ್ತಿರುವ ಪ್ರಕರಣ ಕಂಡುಬಂದಿದೆ.

ಕುಶಾಲನಗರ-ಮೈಸೂರು ರಸ್ತೆಯಲ್ಲಿ ಬೃಹತ್ ವಾಣಿಜ್ಯ ಕಟ್ಟಡಗಳಿಂದ ಹೊರಸೂಸುವ ಕಲುಷಿತ ನೀರು ಚರಂಡಿ ಮೂಲಕ ಹರಿದು ಸ್ಥಳೀಯ ಶೈಲಜಾ ಬಡಾವಣೆಯಲ್ಲಿ ನಿಲುಗಡೆಯಾಗು ತ್ತಿತ್ತು. ಇದರಿಂದಾಗಿ ಇಡೀ ವಾತಾವರಣ ಸಂಪೂರ್ಣ ಹದಗೆಟ್ಟಿತ್ತು. ಬೇಸತ್ತ ನಿವಾಸಿಗಳ ಸಮಸ್ಯೆಗೆ ಪರಿಹಾರ ಕಂಡುಹಿಡಿಯು ವಲ್ಲಿ ಪಂಚಾಯಿತಿ ವಿಫಲವಾಗಿತ್ತು. ಈ ಹಿನ್ನೆಲೆ ಶೈಲಜಾ ಬಡಾವಣೆ ನಿವಾಸಿಗಳು ಚರಂಡಿ ನೀರಿನ ಹರಿವಿಗೆ ಮಣ್ಣು ತುಂಬಿ ಅಡ್ಡಿ ಮಾಡಿದ ಸಂದರ್ಭ ಇಡೀ ಪ್ರದೇಶದಲ್ಲಿ ಕಲುಷಿತ ನೀರು ಸಂಗ್ರಹಗೊಂಡು ಅವಾಂತರ ಉಂಟಾಗಿತ್ತು.

ದಿನನಿತ್ಯ ಸಾವಿರಾರು ಲೀಟರ್ ಪ್ರಮಾಣದ ಕಲುಷಿತ ತ್ಯಾಜ್ಯ ಸಂಗ್ರಹವಾಗಿ ಅಲ್ಲಿನ ಮಹಾರಾಜ ಹೊಟೇಲ್ ಸೇರಿದಂತೆ ಸುತ್ತಮುತ್ತ ಸಾಂಕ್ರಾಮಿಕ ರೋಗಗಳು ಹರಡಲು ಪ್ರಾರಂಭಗೊಂಡಿದ್ದು ಈ ನಿಟ್ಟಿನಲ್ಲಿ ಹೊಟೇಲ್ ಮಾಲೀಕರು ಪಂಚಾಯಿತಿ ಮತ್ತು ಪೊಲೀಸ್ ಅನುಮತಿ ಪಡೆದು ಹೊಟೇಲ್ ಮುಂಭಾಗ ಭಾರೀ ಆಳದ ಇಂಗುಗುಂಡಿ ನಿರ್ಮಿಸಿ ತಾತ್ಕಾಲಿಕ ಪರಿಹಾರ ಕಂಡುಹಿಡಿದಿದ್ದರು.

ದಿನನಿತ್ಯ ಮೇಲ್ಭಾಗದಿಂದ ಹರಿದು ಬರುತ್ತಿರುವ ಕಲುಷಿತ ನೀರನ್ನು ಪಟ್ಟಣ ಪಂಚಾಯಿತಿ ಟ್ಯಾಂಕರ್ ಮೂಲಕ ಮೇಲೆತ್ತಿ ವಿಲೇವಾರಿ ಮಾಡಲು ಪ್ರಾರಂಭಿಸಿದ್ದಾರೆ.

10 ರಿಂದ 15 ಟ್ಯಾಂಕರ್‍ನಷ್ಟು ನೀರು ದಿನಂಪ್ರತಿ ಈ ಇಂಗು ಗುಂಡಿಯಲ್ಲಿ ಸಂಗ್ರಹವಾಗುತ್ತಿದ್ದು ಕಳೆದ 1 ವಾರದಿಂದ ಪಂಚಾಯಿತಿ ಪೌರಕಾರ್ಮಿಕರು ಇದನ್ನು ವಿಲೇವಾರಿ ಮಾಡಲು ಹರಸಾಹಸ ಪಡುತ್ತಿರುವ ದೃಶ್ಯ ಗೋಚರಿಸಿದೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಹೊಟೇಲ್ ಮಾಲೀಕ ಸಂತೋಷ್ ಮನವಿ ಮಾಡಿದ್ದಾರೆ.

- ಸಿಂಚು