ವೀರಾಜಪೇಟೆ, ಜ. 18: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಾಜಪೇಟೆ- ಕರಡ ರಾಜ್ಯ ಹೆದ್ದಾರಿ ಪುತ್ತಾಮಕ್ಕಿ ರಸ್ತೆಯು ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಇಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ ಪರಮೇಶ್ವರ್ ಮಾತನಾಡಿ, ಜನಪ್ರತಿನಿಧಿಗಳ ಪ್ರಯತ್ನದಿಂದ 75 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಎರಡು ಬಾರಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಎರಡು ಬಾರಿಯು ಕೊನೆ ಗಳಿಗೆಯಲ್ಲಿ ರದ್ದುಗೊಂಡಿದೆ. ಯಾವ ಕಾರಣಕ್ಕಾಗಿ ರದ್ದುಗೊಳ್ಳುತ್ತಿದೆ ಎಂಬದು ತಿಳಿಯುತ್ತಿಲ್ಲ. ರಸ್ತೆ ನಿರ್ಮಾಣ ಮಾಡುವಂತೆ ಹಲವಾರು ಬಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ. 20 ದಿನದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ವೀರಾಜಪೇಟೆ ಲೋಕೋಪಯೋಗಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೌಡುದಾರೆ ಚೋಟು ಬಿದ್ದಪ್ಪ ಮಾತನಾಡಿ, ಕಳೆದ 10 ವರ್ಷಗಳಿಂದ ರಸ್ತೆ ಇದೇ ರೀತಿಯಲ್ಲಿದೆ. ವಾಹನ ಗಳು ಸಂಚರಿಸಲು ಸಾಧ್ಯವಾಗದೆ ಖಾಸಗಿ ಬಸ್ಸುಗಳು ಬರಲು ಹಿಂದೇಟು ಹಾಕುತ್ತಿವೆ. ಈ ಭಾಗ ದಿಂದ 150ಕ್ಕೂ ಅಧಿಕ ವಿದ್ಯಾರ್ಥಿ ಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಶಾಲಾ ವಾಹನಗಳು ಕೂಡ ಬರುತ್ತಿಲ್ಲ. ಕೂಡಲೇ ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ ಪ್ರತಿಭಟನೆಯ ಹಾದಿ ಅನಿವಾರ್ಯ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಪಾಲೆಕಂಡ ಮನು ಚಂಗಪ್ಪ, ಸುಬ್ಬಯ್ಯ, ಕರೋಟ್ಟಿರ ಬೆಲ್ಲು ಮಾದಪ್ಪ, ಕಾಳಪ್ಪ, ಕೆ. ಅರುಣ್ ಮಂದಣ್ಣ, ಪುಷ್ಪಾವತಿ ಸೇರಿದಂತೆ ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.