ಮಡಿಕೇರಿ, ಜ. 18: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಶೀಘ್ರದಲ್ಲಿಯೇ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಪ್ರಕೃತಿ ವಿಕೋಪ ಹೋರಾಟ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಮಾನವ ಸರಪಳಿ, ರಸ್ತೆ ತಡೆ ನಡೆಸಿ ಬೇಡಿಕೆ ಈಡೇರಿಸು ವಂತೆ ಒತ್ತಾಯಿಸಿದರು.
ಪ್ರಕೃತಿ ವಿಕೋಪ ಹೋರಾಟ ಸಮಿತಿಯ ಜಿಲ್ಲಾದ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಆರೇಳು ತಿಂಗಳು ಕಳೆದರೂ ಇನ್ನೂ ಕೂಡ ಸಂತ್ರಸ್ತರಿಗೆ ಪುನರ್ವಸತಿ ಆಗಿಲ್ಲ, ಸರ್ಕಾರದ ಭರವಸೆಗಳು ಸುಳ್ಳಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಕೃಷಿ, ತೋಟ ಜಮೀನುಗಳಲ್ಲಿ ಇನ್ನೂ ರಾಶಿ ಮಣ್ಣು ತುಂಬಿ ಕೊಂಡಿದೆ. ನದಿಗಳು ತನ್ನ ದಿಕ್ಕನ್ನೆ ಬದಲಿಸಿದೆ. ಹೀಗಿದ್ದರೂ ಸರ್ಕಾರ ಮಾತ್ರ ತನ್ನ ರಾಜಕೀಯ ಚೆಲ್ಲಾಟದಲ್ಲಿ ಸಮಯ ವ್ಯರ್ಥ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಂದ್ ಎಚ್ಚರಿಕೆ : ನಿರಾಶ್ರಿತರನ್ನು ಸತಾಯಿಸುತ್ತಿರುವ ಸರ್ಕಾರದ ವಿರುದ್ಧ ಹೋರಾಟ ರಾಜಕೀಯ ರಹಿತವಾಗಿ ಮುಂದುವರೆಯಲಿದೆ. ಬೇಡಿಕೆ ಈಡೇರಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗದೆ ಹೋದಲ್ಲಿ ಕೊಡಗು ಬಂದ್ ಸೇರಿದಂತೆ ವಿಧಾನ ಸಭೆ ಎದುರು ಪ್ರತಿಭಟನೆ ಮಾಡಲಾಗುವದು ಎಂದು ದೇವಯ್ಯ ಎಚ್ಚರಿಸಿದರು.
ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ : ಜಿಲ್ಲೆಯಲ್ಲಿ 40 ಗ್ರಾಮಗಳಲ್ಲಿ ವಿಕೋಪದಿಂದ ಹಾನಿಯಾಗಿದ್ದು, ಇಲ್ಲಿಯ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮರೆತ್ತಿದ್ದಾರೆ. ಈ ಭಾಗದ ಸಂತ್ರಸ್ತ ಜನರು ಮುಂದಿನ ಯಾವದೆ ಚುನಾವಣೆ ಬರಲಿ ಅವುಗಳಿಗೆ ಮತ ನೀಡದೆ ಚುನಾವಣೆ ಬಹಿಷ್ಕರಿಸಲಾಗುವದು ಎಂದು ದೇವಯ್ಯಹೇಳಿದರು.
ಪ್ರಕೃತಿ ವಿಕೋಪ ಹೋರಾಟ ಸಮಿತಿಯ ಪ್ರಮುಖ ರವಿ ಕಾಳಪ್ಪ, ಸರ್ಕಾರ ಹಾಗೂ ಜಿಲ್ಲಾಡಳಿತ ಮೇಲಿಂದ ಮೇಲೆ ಸಭೆ ನಡೆಸಿ ಹಣ ಬಿಡುಗಡೆಯಾಗಿದೆ ಎಂದು ಭರವಸೆಗಳನ್ನು ಮಾತ್ರ ನೀಡುತ್ತಿದೆ ಹೊರತು ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಇನ್ನೂ 3 ತಿಂಗಳಿನಲ್ಲಿ ಮತ್ತೆ ಮಳೆ ಪ್ರಾರಂಭವಾಗಲಿದ್ದು ಆ ಸಂದರ್ಭ ಮನೆ ಕಳೆದುಕೊಂಡ ಸಂತ್ರಸ್ತರು ಹೋಗುವದಾದರೂ ಎಲ್ಲಿಗೆ, ಹೊಳೆಗಳಲ್ಲಿ ಹೂಳು ತುಂಬಿದ್ದು (ಮೊದಲ ಪುಟದಿಂದ) ಹೂಳೆತ್ತುವ ಕೆಲಸ, ತೋಟ, ಗದ್ದೆಗಳಲ್ಲಿ ಬಿದ್ದ ಮರಗಳನ್ನು ತೆರವು ಗೊಳಿಸುವ ಕೆಲಸವನ್ನು ಮಾಡುತ್ತಿಲ್ಲ ಎಂದು ಅಲವತ್ತುಕೊಂಡರು.
ಪರಿಹಾರ ನೀಡದೆ ಸರ್ಕಾರ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ. ಈಗಾಗಲೇ ಒಬ್ಬ ಸಂತ್ರಸ್ತ ಆತ್ಮಹತ್ಯೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಸಾಲಗಾರರ ಹಾವಳಿಯಿಂದ ಮತ್ತಷ್ಟು ಸಾವು ಸಂಭವಿಸಬಹುದು ಎಂದು ಆತಂಕ ವ್ಯಕ್ತ ಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸಾಕಷ್ಟು ಹಣ ಬಂದಿದೆ. ಇದನ್ನು ಸಕಾಲದಲ್ಲಿ ಬಳಸಬೇಕಿದೆ. ಕೋಟ್ಯಂತರ ಹಣ ನಿರಾಶ್ರಿತರ ಮೂಲ ಸೌಕರ್ಯಕ್ಕೆ ಬಳಕೆಯಾಗಬೇಕು ಎಂದು ಮನವಿ ಮಾಡಿದರು.
ಸಂತ್ರಸ್ತ ಕೃಷಿಕರ ಜಮೀನಿನ ಸರ್ವೆ ಕಾರ್ಯ ಇನ್ನೂ ಮುಗಿದಿಲ್ಲ. ಅಧಿಕಾರಿಗಳು ಪರಿಹಾರ ಚೆಕ್ ವಿತರಣೆ, ಬಾಡಿಗೆ ಮನೆ ಹಣ ವಿಷಯದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ದೂರಿದರು. ಸಂತ್ರಸ್ತರ ನೆರವಿಗೆ ಬಂದ ಕೋಟ್ಯಂತರ ಹಣ ದುರ್ಬಳಕೆಯಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಸಮಿತಿಯ ಸದಸ್ಯರಾದ ರವಿ ಕುಶಾಲಪ್ಪ, ಕೆ.ಟಿ. ಪ್ರಸನ್ನ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸಂತ್ರಸ್ತರು ಪಾಲ್ಗೊಂಡಿದ್ದರು.