ಮಡಿಕೇರಿ, ಜ. 18: ಮಂಗಳಾದೇವಿ ನಗರದ ಯುವಕ ಜಯಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಪೊಲೀಸರ ಕಿರುಕುಳವೇ ಕಾರಣ, ಕೂಡಲೇ ಬೈಲುಕುಪ್ಪೆ ಹಾಗೂ ಬೆಟ್ಟದಪುರ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.
ಬಹುಜನ ಸಮಾಜ ಪಕ್ಷ, ದಲಿತ ಸಂಘಟನೆಗಳ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಎಸ್‍ಡಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು
ನಗರದ ಇಂದಿರಾಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಕಾರರು ಯುವಕನ ಸಾವಿಗೆ ಕಾರಣರಾದ ಬೈಲುಕುಪ್ಪೆ ಠಾಣೆಯ ಪಿಎಸ್‍ಐ, ಎಎಸ್‍ಐ, ಬೆಟ್ಟದಪುರ ಠಾಣೆಯ ಪಿಎಸ್‍ಐ, ಕಾನ್‍ಸ್ಟೆಬಲ್‍ಗಳು ಸೇರಿ 23 ಮಂದಿಯನ್ನು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.
ಬಹುಜನ ಸಮಾಜ ಪಕ್ಷದ ಮುಖಂಡ ಮೋಹನ್ ಮೌರ್ಯ ಮಾತನಾಡಿ, ಕುಶಾಲನಗರದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ಡಾ.ದಿಲೀಪ್ ಕೊಲೆ ಪ್ರಕರಣದಲ್ಲಿ ಯುವಕ ಜಯಕುಮಾರ್ ಮೇಲೆ ಆರೋಪ ಮಾಡಿ ಕಿರಿಕುಳ ನೀಡಿದ್ದಾರೆ, ಈ ಬಗ್ಗೆ ಮಡಿಕೇರಿ ಠಾಣೆಯಲ್ಲಿ ದೂರು ನೀಡಿ 15 ದಿನ ಕಳೆದರೂ ಇಲಾಖೆ ಯಾವದೆ ತನಿಖೆ ನಡೆಸಿಲ್ಲ ಎಂದು ಆರೋಪಿಸಿದರು,
ಪ್ರತಿಭಟನೆಯಿಂದ ನ್ಯಾಯ ಸಿಗದೆ ಇದ್ದ ಪಕ್ಷದಲ್ಲಿ ರಾಜ್ಯದ್ಯಾಂತ ದಲಿತ ಸದಸ್ಯರನ್ನು ಒಟ್ಟುಗೂಡಿಸಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಮೈಸೂರಿನ ಡಿಐಜಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವದು ಎಂದು ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಎಚ್.ಎಲ್ ದಿವಾಕರ್ ಮಾತನಾಡಿ, ಜಾತಿ ನಿಂದನೆ ಹಾಗೂ ದೈಹಿಕ ಹಲ್ಲೆ ನಡೆಸಿದ ಕಾರಣಕ್ಕೆ ಜಯಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರ ಕಿರುಕುಳದ ಬಗ್ಗೆ ಮರಣಪತ್ರ ಸಹ ಬರೆದಿಟ್ಟಿದ್ದು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ವಿವಿಧ ಸಂಘಟನೆ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.