ಗ್ರಾಮ ಪಂಚಾಯಿತಿ ಸಭೆಯಲ್ಲಿ ತೀರ್ಮಾನ ಮಡಿಕೇರಿ, ಜ. 18: ಗಾಳಿಬೀಡಿನಿಂದ ಮಡಿಕೇರಿಗೆ ಕುಡಿಯುವ ನೀರಿನ ಸರಬರಾಜನ್ನು ಸ್ಥಗಿತಗೊಳಿಸಲು ಪಂಚಾಯಿತಿಯ ಗ್ರಾಮಸಭೆಯಲ್ಲಿ ತೀರ್ಮಾನಿಸಲಾಗಿದೆ.ಕುಂಡಾಮೇಸ್ತ್ರಿ ಯೋಜನೆಗಾಗಿ ಮಡಿಕೇರಿ ನಗರಸಭೆಯು ದರ್ಜಿಬಕ್ಕದಿಂದ ಕಟ್ಟೆಕಲ್ಲುವಿನ ರಸ್ತೆಯಲ್ಲಿ ಪೈಪ್‍ಲೈನ್ ಅಳವಡಿಸಿದಾಗ ರಸ್ತೆ ಹಾಳಾಗಿತ್ತು. ಈ ಬಗ್ಗೆ ಹಲವು ಬಾರಿ ಗ್ರಾಮಸಭೆಯಲ್ಲಿ ಚರ್ಚಿಸಲಾಗಿತ್ತು ಹಾಗೂ ನಗರಸಭೆಗೆ ಅರ್ಜಿ ಸಲ್ಲಿಸಲಾಗಿತ್ತು.

ಆದರೆ ನಗರಸಭೆ ಈ ಬಗ್ಗೆ ಯಾವದೇ ಕ್ರಮ ಕೈಗೊಳ್ಳದ್ದರಿಂದ, ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಚರ್ಚಿಸಲಾಗಿ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸದಿದ್ದಲ್ಲಿ ನೀರು ಸಂಪರ್ಕ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಪಂಚಾಯಿತಿ ಅಧ್ಯಕ್ಷ ಸುಭಾಶ್ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 172 ಮಂದಿ ಗ್ರಾಮಸ್ಥರು ಹಾಜರಿದ್ದುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.