*ಸಿದ್ದಾಪುರ, ಜ. 18: ರಾತ್ರಿ ವೇಳೆ ಮಿನಿ ಲಾರಿಯಲ್ಲಿ ಅಕ್ರಮವಾಗಿ ಮರಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಗ್ರಾಮಸ್ಥರು ಪತ್ತೆಹಚ್ಚಿ ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಿದ ಘಟನೆ ಸಮೀಪದ ಚೆಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈರಳವಳಮುಡಿ ಗ್ರಾಮದಲ್ಲಿ ನಡೆದಿದೆ.

ನಾಸೀರ್ ಎಂಬವರಿಗೆ ಸೇರಿದ (ಏಂ 12 ಃ 3151 ) ಮಿನಿ ಲಾರಿಯಲ್ಲಿ ನಿನ್ನೆ ರಾತ್ರಿ ನಂದಿ, ದೂಪ, ಬೆಳ್ಳಂದಿ ಮತ್ತು ಇತರ ಕಾಡು ಜಾತಿಯ ಮರಗಳನ್ನು ಕಡಿದು ದಿಮ್ಮಿಗಳಾಗಿ ಪರಿವರ್ತಿಸಿ ಸಾಗಾಟ ಮಾಡುತ್ತಿದ್ದ ವೇಳೆ ಸಂಶಯಗೊಂಡ ಚೆಟ್ಟಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಮತ್ತು ಇತರರು ವಾಹನ ನಿಲ್ಲಿಸಿ ಮರಗಳ ಸಾಗಾಟದ ಬಗ್ಗೆ ವಿಚಾರಿಸಿದ್ದಾರೆ. ಮಿನಿ ಲಾರಿ ಚಾಲಕ ಶಂಕಾಸ್ಪದ ರೀತಿಯಲ್ಲಿ ಉತ್ತರಿಸಿದ ಕಾರಣ ಚೆಟ್ಟಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಮಾಲು ಸಹಿತ ವಾಹನವನ್ನು ಮುಟ್ಟುಗೋಲು ಹಾಕಿಕೊಂಡರು.

ಈರಳವಳಮುಡಿ ಗ್ರಾಮದ ಡಾ. ಮೂಡೇರ ಸುರೇಶ್ ಎಂಬವರ ಕಾಫಿ ತೋಟದಿಂದ ಮರಗಳನ್ನು ಕದ್ದು ಸಾಗಾಟ ಮಾಡಲಾಗುತ್ತಿತ್ತು. ಈ ಹಿಂದೆ ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಬೆಳ್ಳಂದಿ ಮರವನ್ನು ಮರಗಳ್ಳರು ಸಾಗಿಸುತ್ತಿದ್ದರು ಎಂದು ಕಂಠಿ ಕಾರ್ಯಪ್ಪ ತಿಳಿಸಿದರು.

ಅಂದಾಜು 1 ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಮರಗಳನ್ನು ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದರು. ಮರದ ನಾಟಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಉಪವಲಯ ಅರಣ್ಯಾಧಿಕಾರಿ ಉಲ್ಲಾಸ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಚರಣ್, ಸಚ್ಚಿನ್ ಭಾಗವಹಿಸಿದ್ದರು.

-ಅಂಚೆಮನೆ ಸುಧಿ