*ಗೋಣಿಕೊಪ್ಪಲು, ಜ. 17 : ಪಟ್ಟಣದಲ್ಲಿ ಏಕಾಏಕಿ ಏಕಮುಖ ವಾಹನ ಸಂಚಾರಕ್ಕೆ ಮುಂದಾಗಿ ರುವದರ ವಿರೋಧಿಸಿ ವರ್ತಕರು ಕರೆ ನೀಡಿದ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಒಂದು ದಿನದ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗಿ ಪ್ರತಿಭಟನೆಯಲ್ಲಿ ನಿರತ ರಾದರು. ಬೆಳಗ್ಗಿನಿಂದ ಸಂಜೆಯವರೆಗೆ ಗ್ರಾ.ಪಂ. ವಾಣಿಜ್ಯ ಸಂಕೀರ್ಣಗಳ ಮುಂದೆ ಬಹು ಸಂಖ್ಯೆಯಲ್ಲಿ ವರ್ತಕರು ಕುಳಿತು ಸಂಜೆಯ ತನಕ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡರು.ಏಕಮುಖ ಸಂಚಾರದ ಅವ್ಯವಸ್ಥೆ ಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗುತ್ತಾ ಏಕಮುಖ ಸಂಚಾರದಿಂದ ವ್ಯಾಪಾರಕ್ಕೆ ಉಂಟಾಗುತ್ತಿರುವ ನಷ್ಟದ ಬಗ್ಗೆ ಅಳಲು ತೋಡಿಕೊಂಡರು.ಚೇಂಬರ್ ಆಫ್ ಕಾರ್ಮಸ್ ಸ್ಥಾನೀಯ ಸಮಿತಿ ಬಂದ್‍ಗೆ ಬೆಂಬಲ ನೀಡದೆ ಇದ್ದರೂ ವರ್ತಕರೆ ಮುಂದೆ ನಿಂತು ಪ್ರತಿಭಟಿಸುವ ಮೂಲಕ ಏಕಮುಖ ಸಂಚಾರವನ್ನು ವಿರೋಧಿಸಿದರು. ಬಂದ್‍ಗೆ ಬೆಂಬಲ ಸೂಚಿಸಿ ಪಟ್ಟಣದ ಶೇ. 90 ರಷ್ಟು ಅಂಗಡಿ ಮಳಿಗೆಗಳು ಮುಚ್ಚಲ್ಪಟ್ಟಿದ್ದವು.
ಪಟ್ಟಣದಲ್ಲಿನ ಬಂದ್ ಹಿನ್ನೆಲೆ ಹೊರಗಿನಿಂದ ಬರುವವರ ಸಂಖ್ಯೆ ಕಡಿಮೆಯಾಗಿತು. ಪಟ್ಟಣದಲ್ಲಿ ಬೆರಳೆಣಿಕೆಯ ಜನರು ಕಂಡು ಬಂದರು ಬಸ್‍ಗಳಿಗೆ, ಆಟೋಗಳಿಗೆ ಗಿರಾಕಿಗಳಿರಲಿಲ್ಲ. ಸಾರ್ವಜನಿಕರಿಗೆ ಯಾವದೆ ಸಮಸ್ಯೆ ಉಂಟಾಗಲಿಲ್ಲ.
(ಮೊದಲ ಪುಟದಿಂದ) ಉಳಿದಂತೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಹಾಗೂ ಮುಖ್ಯ ರಸ್ತೆಯಲ್ಲಿ ಕೆಲವೆ ಕೆಲವು ಅಂಗಡಿಗಳು ತೆರೆದಿದ್ದವು. ಔಷದಿ ಮಳಿಗೆ, ಮದ್ಯದ ಅಂಗಡಿ,ಕೆಲವು ಹೊಟೇಲ್, ಕ್ಯಾಂಟಿನ್, ಮಾಂಸ, ಮೀನಿನ ಅಂಗಡಿ ಮತ್ತು ಒಂದೆರಡು ಜಿನಸಿ ಅಂಗಡಿಗಳು ತೆರದಿದ್ದವು. ಉಳಿದಂತೆ ಯಾವದೆ ಅಂಗಡಿಗಳು ತೆರೆದಿರಲಿಲ್ಲ.
ಬಂದ್ ಹಿನ್ನೆಲೆ ಯಾವದೇ ವ್ಯಾಪಾರ ವಹಿವಾಟು ಇರಲಿಲ್ಲ. ವಾಹನ ಸಂಚಾರಕ್ಕೆ ಸಭೆ ಸಮಾರಂಭಗಳಿಗೆ ಯಾವದೆ ಸಮಸ್ಯೆ ಉಂಟಾಗಲಿಲ್ಲ.
ವರ್ತಕ ಮಚ್ಚಮಾಡ ಅನಿಶ್ ಮಾದಪ್ಪ, ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿ.ಪಂ. ಸದಸ್ಯೆ ಶ್ರೀಜಾಶಾಜಿ, ಗ್ರಾ.ಪಂ. ಸದಸ್ಯರುಗಳಾದ ಮುರುಗ, ಜೆ.ಕೆ. ಸೋಮಣ್ಣ, ಪ್ರಮುಖರಾದ ಗಜಾನನ ಶೇಟ್, ಶಿವಾಜಿ, ಚಡ್‍ಕನ್ ರಫೀಕ್, ಅಶ್ರಫ್, ಸಜೀವ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ನಿರತರಾಗಿದ್ದರು.
ಬೆಳಗ್ಗಿನಿಂದ ಸಂಜೆಯವರೆಗೆ ಗ್ರಾ.ಪಂ. ವಾಣಿಜ್ಯ ಸಂಖ್ಯೆಗಳ ಮುಂದೆ ಬಹು ಸಂಖ್ಯೆಯಲ್ಲಿ ವರ್ತಕರು ಕುಳಿತು ಸಂಜೆಯ ತನಕ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡರು. ಸಂಜೆ 6 ಗಂಟೆ ಬಳಿಕ ಅಂಗಡಿ ಮುಂಗಟ್ಟುಗಳು ತೆರೆಯಲ್ಪಟ್ಟವು. ಪ್ರತಿಭಟನಾಕಾರರು ಡಿವೈಎಸ್‍ಪಿ ನಾಗಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಇದೇ ತಾ. 28ರಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಗೋಣಿಕೊಪ್ಪಲಿಗೆ ಆಗಮಿಸಲಿದ್ದು, ವರ್ತಕರು, ನಾಗರಿಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವದಾಗಿ ಡಿವೈಎಸ್‍ಪಿ ತಿಳಿಸಿದರು. - ವರದಿ ಎನ್.ಎನ್. ದಿನೇಶ್