ಮಡಿಕೇರಿ, ಜ. 17: ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಶಾಸಕರನ್ನು ಸೆಳೆಯಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಇಂದು ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಭಾರತೀಯ ಜನತಾ ಪಾರ್ಟಿ ಸಂವಿಧಾನ ವಿರೋಧಿ ಚಟುವಟಿಕೆ ಮಾಡುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆ ಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಶಾಸಕರ ಖರೀದಿಗೆ ಮುಂದಾಗುವ ಮೂಲಕ ರಾಜ್ಯ ಸರ್ಕಾರವನ್ನು ಉರುಳಿಸಲು ಮುಂದಾಗಿರುವ ಬಿಜೆಪಿಯ ನಡೆ ಖಂಡನೀಯ. ವಾಮಮಾರ್ಗದಲ್ಲಿ ಅಧಿಕಾರಕ್ಕೇರಬಹುದು ಎಂಬ ಬಿಜೆಪಿಯ ಆಸೆ ಈಡೇರುವದಿಲ್ಲ ಎಂದು ಹೇಳಿದರು. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಜನತೆ ಸಂಕಷ್ಟದಲ್ಲಿರುವಾಗ ಇಲ್ಲಿನ ಶಾಸಕರು ಬಿಜೆಪಿ ರಾಜ್ಯ ನಾಯಕರ ಜೊತೆ ಸೇರಿ ಕುದುರೆ ವ್ಯಾಪಾರದಲ್ಲಿ ತೊಡಗಿ ರುವದು ನಾಚಿಕೆಗೇಡಿನ ಸಂಗತಿ ಎಂದು ವೀಣಾ ಟೀಕಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಮಿಟ್ಟು ಚಂಗಪ್ಪ, ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಬ್ಲಾಕ್ ಅಧ್ಯಕ್ಷರುಗಳಾದ ಅಪ್ರುರವೀಂದ್ರ, ರಮಾನಾಥ್, ಮಡಿಕೇರಿ ನಗರಾಧ್ಯಕ್ಷ ಅಬ್ದುಲ್‍ರಜಾಕ್, ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರುಗಳಾದ

(ಮೊದಲ ಪುಟದಿಂದ) ನಂದಕುಮಾರ್, ಉದಯಕುಮಾರ್, ಪ್ರಕಾಶ್‍ಆಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.

ವೀರಾಜಪೇಟೆ: ರಾಜ್ಯ ಸರಕಾರವನ್ನು ಅಸ್ತಿರಗೊಳಿಸಲು ಬಿಜೆಪಿ ಆಪರೇಷನ್ ಕಮಲ ಮಾಡಲು ಯತ್ನ ನಡೆಸುತ್ತಿರುವದನ್ನು ಖಂಡಿಸಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಕಾರ್ಯಕರ್ತರು ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು.

ನಂತರ ಪ್ರತಿಭಟನಾ ಸಂದರ್ಭದಲ್ಲಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಅರುಣ್ ಮಾಚಯ್ಯ ಅವರು, ರಾಜ್ಯದಲ್ಲಿ ಸರಕಾರವನ್ನು ಅಸ್ತಿರಗೊಳಿಸುವ ಯತ್ನ ಮಾಡುತ್ತಿರುವ ಯಡಿಯೂರಪ್ಪಗೆ ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಬಲ ನೀಡುತ್ತಿದ್ದಾರೆ. ನಿರುದ್ಯೋಗ ಸೇರಿದಂತೆ ಅನೇಕ ಸಮಸ್ಯೆ ದೇಶವನ್ನು ಕಾಡುತ್ತಿದ್ದು ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅರುಣ್ ಮಾಚಯ್ಯ ಹೇಳಿದರು.

ಸಾಲ ಮನ್ನಾ ಬಗ್ಗೆ ನಮ್ಮನ್ನು ಟೀಕಿಸುತ್ತಾರೆ, ಆದರೆ ಅಂದು ಯಡಿಯೂರಪ್ಪ ಸಾಲಮನ್ನಾ ವಿಚಾರದಲ್ಲಿ ನೋಟ್ ಪ್ರಿಂಟಿಂಗ್ ಮಿಷಿನ್ ಇಟ್ಟಿಲ್ಲ ಎಂದು ಸದನದಲ್ಲಿ ಉತ್ತರಿಸಿದ್ದು ಮರೆತು ಹೋಯಿತೆ. ಇಂದಿನ ಕುಮಾರಸ್ವಾಮಿ ಸರಕಾರ, ಈಗಾಗಲೆ ಸಹಕಾರ ಬ್ಯಾಂಕ್‍ನ ಒಂದು ಲಕ್ಷ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಕಾರ್ಯಕ್ರಮ ಮಾಡುತ್ತಿಲ್ಲವೆ. ಸರಕಾರ ನೀಡಿದ ಭರವಸೆಗಿಂತ ಹೆಚ್ಚಿನ ಕಾರ್ಯಕ್ರಮ ರೂಪಿಸಿ ಕೆಲಸ ಮಾಡುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ , ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ , ಕಾಂಗ್ರೆಸ್ ಜಿಲ್ಲಾ ಸೇವಾದಳ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ, ಜಿಲ್ಲಾ ಕಾಂಗ್ರ್ರೆಸ್ ಕಾನೂನು ಘಟಕದ ಅಧ್ಯಕ್ಷ ಡಿ.ಸಿ. ಧ್ರುವ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕ್ ಅಧ್ಯಕ್ಷ ಸತೀಶ್, ಹಿರಿಯ ಪ್ರಮುಖರಾದ ಎಂ.ಎಸ್. ಪೂವಯ್ಯ, ಮಾಲೇಟಿರ ಬೆಲ್ಲು ಬೋಪಯ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್, ಕಾರ್ಯದರ್ಶಿ ಶಶಿಧರನ್, ಪ.ಪಂ. ಸದಸ್ಯರುಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಕುಶಾಲನಗರ: ಕರ್ನಾಟಕ ರಾಜ್ಯದಲ್ಲಿರುವ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬುಡಮೇಲು ಮಾಡಲು ಹೊರಟ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಪಿ.ಚಂದ್ರಕಲಾ, ಮಂಜುನಾಥ ಗುಂಡೂರಾವ್, ಎಂ.ನಂಜುಂಡ ಸ್ವಾಮಿ, ಶಾಂತಪ್ಪ, ಗೋವಿಂದರಾಜು, ಪಂಚಾಯತಿ ಸದಸ್ಯರಾದ ಖಲೀಮುಲ್ಲಾ, ದಿನೇಶ್, ಪ್ರಮೋದ್ ಇದ್ದರು.