ಮಡಿಕೇರಿ, ಜ. 17: ಮಾನವೀಯತೆ ಎಲ್ಲಾ ಧರ್ಮಕ್ಕಿಂತ ಮಿಗಿಲಾಗಿದ್ದು, ಪ್ರತಿಯೊಬ್ಬರು ಜೀವನದಲ್ಲಿ ಮಾನವೀಯತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಜಮಾಯತ್ ಉಲಮಾ ಎ - ಕರ್ನಾಟಕದ ಅಧ್ಯಕ್ಷ ಮೌಲಾನ ಮುಫ್ತಿ ಇಫ್ತಖಾರ್ ಅಹಮದ್ ಹೇಳಿದರು.ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಮಾಯತ್ ಉಲಮಾ ಎ - ಕರ್ನಾಟಕ ಬೆಂಗಳೂರು ಹಾಗೂ ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ (ಮೊದಲ ಪುಟದಿಂದ) “ರಾಷ್ಟ್ರೀಯ ಭಾವೈಕ್ಯತೆ ಸಮಾವೇಶ” ಹಾಗೂ “ಸಂತ್ರಸ್ತರಿಗೆ ಸಹಾಯಧನ” ವಿತರಣಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇವರು ಪ್ರತಿಯೊಬ್ಬ ಮಾನವನಲ್ಲೂ ಮಾನವೀಯತೆಯನ್ನು ಬಿತ್ತಿದ್ದು, ಸಂಕಷ್ಟದಲ್ಲಿರುವವರಿಗೆ ಮಾನವೀಯತೆ ಮೂಲಕ ಬೆಳಕು ನೀಡುವ ಕಾರ್ಯ ಮಾಡಬೇಕು.

ಭಗವಂತ, ಪ್ರಾಣಿಗಳಿಗೂ ಮಾನವೀಯತೆಯನ್ನು ನೀಡಿದ್ದಾನೆ. ಆದರೆ ಅವುಗಳಿಗೆ ಜವಾಬ್ದಾರಿ ಇಲ್ಲ. ಆದರೆ ಮನುಷ್ಯನಾದವನಿಗೆ ಪರಸ್ಪರರ ಸಂಕಷ್ಟಕ್ಕೆ ಸ್ಪಂದಿಸುವ ಜವಾಬ್ದಾರಿಯಿದೆ. ಸಾಯುತ್ತಿರು ವವರನ್ನು, ಸಂಕಷ್ಟದಲ್ಲಿರುವವರನ್ನು ಬದುಕಿಸುವದು ಮಾನವನ ಕೆಲಸ ಎಂದರು.

ಜಮಾಯತ್ ಉಲಮಾ ಎ - ಕರ್ನಾಟಕದ ಜನರಲ್ ಸೆಕ್ರೆಟರಿ ಹಜರತ್ ಮೌಲಾನ ಮುಪ್ತಿ ಸಂಶೂದ್ಧಿನ್ ಮಾತನಾಡಿ, ದೇವರು ನಮ್ಮನ್ನು ಪ್ರತಿ ಹಂತದಲ್ಲೂ ಪರೀಕ್ಷೆ ಮಾಡುತ್ತಾನೆ. ಹುಟ್ಟು ಮತ್ತು ಸಾವಿನ ನಡುವೆ ಉತ್ತಮ ವ್ಯಕ್ತಿಗಳಾಗಿ ಬದುಕು ಸಾಗಿಸಬೇಕು. ಇಲ್ಲಿ ಬದುಕು ಸಾಗಿಸುವಷ್ಟು ದಿನವೂ ಮಾನವೀಯತೆಗೆ ಮಿಡಿಯುವವರಾಗಿರಬೇಕು ಎಂದರು.

ಪ್ರತಿಯೊಬ್ಬ ಮಾನವ ಮತ್ತೊಬ್ಬನ ಸಂಕಷ್ಟಕ್ಕೆ ಮಿಡಿಯಬೇಕು. ಜಮಾಯತ್ ಉಲಮಾ ರಾಜಕೀಯ ರಹಿತ ಸಂಸ್ಥೆಯಾಗಿದ್ದು, ಮಾನವೀಯತೆಯ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಈ ಮಾನವೀಯತೆಯ ಜೊತೆ ಸಂಸ್ಥೆಗೆ ತನ್ನದೇ ಆದ ಜವಾಬ್ದಾರಿಯಿದ್ದು, ಪರಸ್ಪರರ ಸಂಕಷ್ಟಕ್ಕೆ ಮಿಡಿಯುತ್ತಿದೆ ಎಂದು ಹೇಳಿದರು.

ಜಮಾಯತ್ ಉಲಮಾ ಎ - ಕರ್ನಾಟಕದ ಉಪಾಧ್ಯಕ್ಷ ಜೈನುಲ್ಲಾ ಆಭಿದಿನ್ ರಶಾದಿ ಮುಜಹಿರಿ ಮಾತನಾಡಿ, ಜಗತ್ತನ್ನು ಒಂದುಗೂಡಿಸಲು ಭಗವಂತ ನಮ್ಮನ್ನು ಈ ಭೂಮಿಗೆ ಕಳುಹಿಸಿದ್ದಾನೆ. ಆದರಿಂದ ನಾವು ಜಗತ್ತನ್ನು ಒಡೆಯುವ ಕಾರ್ಯ ಮಾಡಬಾರದು ಎಂದರು ಹೇಳಿದರು.

ಸಮಾವೇಶದೊಂದಿಗೆ ಸಹಾಯಧನ ವಿತರಣೆ ನಡೆಯುತ್ತಿರುವದು ಕೂಡ ಎಲ್ಲರನ್ನೂ ಒಂದು ಗೂಡಿಸುವ ಸಲುವಾಗಿಯೇ ಎಂದು ಎಂದರು.

ನಗರಸಭೆ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಮನುಷ್ಯನಿಗೆ ತನ್ನ ಜೀವನದ ಪ್ರತಿಯೊಂದು ಕ್ಷಣವೂ ಪರೀಕ್ಷೆಯಿದ್ದಂತೆ. ಈ ಸಮಯದಲ್ಲಿ ಮನುಷ್ಯ ಪರಸ್ಪರರ ಪ್ರೀತಿ ಸಂಪಾದಿಸಬೇಕೆ ಹೊರತು, ಅರಾಜಕತೆಯನ್ನು ಸೃಷ್ಟಿಸಬಾರದು. ಕೊಡಗಿನ ಪ್ರಕೃತಿ ವಿಕೋಪದಿಂದ ಹಲವು ಮಂದಿಗೆ ಸಾಕಷ್ಟು ನೋವುಂಟಾಗಿದೆ. ಬದುಕು ಸಾಗಿಸಲು ಕಟ್ಟಿಕೊಂಡಿದ್ದ ಕನಸು ನುಚ್ಚು ನೂರಾಗಿದ್ದು, ಹಣ, ಒಡವೆ ಎಲ್ಲವೂ ಮಣ್ಣು ಪಾಲಾಗಿವೆ. ಆದರೆ ಇಲ್ಲಿ ಸೋಲಬಾರದು. ಇಂತಹ ಕಷ್ಟದ ಸಮಯದಲ್ಲಿ ತಾಳ್ಮೆ ವಹಿಸಿ ಮುನ್ನುಗ್ಗಬೇಕು ಎಂದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಕೊಡಗಿನ ಸಂತ್ರಸ್ತರಿಗೆ ಸಂಘ, ಸಂಸ್ಥೆ ಸೇರಿದಂತೆ ದೇಶದ ವಿವಿಧ ಕಡೆಯಿಂದ ಸಹಾಯ ದೊರಕಿದೆ. ವಿಕೋಪದ ಸಂದರ್ಭ ಜಾತಿ, ಬೇಧ ಮರೆತು ಪರಸ್ಪರರ ಸಂಕಷ್ಟಕ್ಕೆ ಮಿಡಿದಿರುವದು ಸಂತೋಷದ ವಿಚಾರ ಎಂದರು. ವೇದಿಕೆಯಲ್ಲಿ ಜಮಾಯತ್ ಉಲಮಾ ಸಂಸ್ಥೆಯ ಪ್ರಮುಖರು ಇದ್ದರು. ಮನ್ಸೂರ್ ಕಾರ್ಯಕ್ರಮ ನಿರೂಪಿಸಿದರು.