ಸೋಮವಾರಪೇಟೆ, ಜ. 17: ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ಮತ್ತು 60ನೇ ವರ್ಷದ ರಥೋತ್ಸವ ಕಾರ್ಯಗಳಿಗೆ ಇಂದು ವಿಧ್ಯುಕ್ತ ತೆರೆ ಬಿದ್ದಿತು.
ದೇವಾಲಯದಲ್ಲಿ ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ದೇವಾಲಯದ ಪ್ರಧಾನ ಅರ್ಚಕ ರಮೇಶ್ ಹೆಗಡೆ ನೇತೃತ್ವದ ತಂಡದವರಿಂದ ಮಹಾ ಸಂಪ್ರೋಕ್ಷಣೆ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ ನಂತರ ಮಂಗಳ ಪ್ರಾರ್ಥನೆ ನಡೆಯುವ ಮೂಲಕ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವ ತೆರೆಕಂಡಿತು.
ದೇವಾಲಯದ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಅವರು, ಜಾತ್ರಾ ಮಹೋತ್ಸವಗಳು ಜನಸಾಮಾನ್ಯರ ಬೆರೆಯುವಿಕೆಗೆ ಸಹಕಾರಿಯಾಗಿದೆ ಎಂದರು.
ಗ್ರಾಮಗಳಲ್ಲಿ ದೇವಾಲಯ ನಿರ್ಮಿಸುವದು, ಪೂಜೋತ್ಸವಗಳನ್ನು ಆಯೋಜಿಸುವದರಿಂದ ಸುಭೀಕ್ಷೆಯೊಂದಿಗೆ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ. ಶಾಂತಳ್ಳಿಯಲ್ಲಿ ಶ್ರದ್ಧಾಭಕ್ತಿಯಿಂದ ವರ್ಷಂಪ್ರತಿ ರಥೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ದೇವಾಲಯ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮತ್ತು ದಾನಿಗಳ ಸಹಕಾರ ಶ್ಲಾಘನೀಯ ಎಂದರು.
ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ದೈವಿಕ ಕಾರ್ಯಕ್ರಮಗಳು ಗ್ರಾಮದ ಸಾಮರಸ್ಯಕ್ಕೆ ಮುನ್ನುಡಿಯಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಜಿ.ಎಸ್. ರಘುಕುಮಾರ್ ವಹಿಸಿದ್ದರು.
ತಾ.ಪಂ. ಸದಸ್ಯ ಧರ್ಮಪ್ಪ, ಜಿ.ಪಂ. ಸದಸ್ಯೆ ಕವಿತ ಪ್ರಭಾಕರ್, ಶಾಂತಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಕುಂದಳ್ಳಿ ದಿನೇಶ್, ಬೆಟ್ಟದಳ್ಳಿ ಗ್ರಾ.ಪಂ. ಅಧ್ಯಕ್ಷೆ ಪವಿತ್ರ, ದೇವಾಲಯ ಸಮಿತಿ ಉಪಾಧ್ಯಕ್ಷ ಕೆ.ಟಿ. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಕೆ. ಪರಮೇಶ, ಖಜಾಂಚಿ ಡಿ.ಎಸ್. ಲಿಂಗರಾಜು, ಸಹ ಕಾರ್ಯದರ್ಶಿ ದಿವ್ಯಕುಮಾರ್, ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಚಂಗಪ್ಪ ಸೇರಿದಂತೆ ಧರ್ಮದರ್ಶಿ ಮಂಡಳಿ ಸದಸ್ಯರುಗಳು ಈ ಸಂದರ್ಭ ಉಪಸ್ಥಿತರಿದ್ದರು.
ದೇವಾಲಯಕ್ಕೆ ಆರ್ಥಿಕ ಸಹಾಯ ಮಾಡುತ್ತಿರುವ ನಗರಳ್ಳಿ ಗ್ರಾಮದ ಜಿ.ಪಿ. ವೆಂಕಟೇಶ್ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.