ವೀರಾಜಪೇಟೆ, ಜ. 17: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ಅಕ್ರಮವಾಗಿ ಕಂದಾಯ ಇಲಾಖೆಯು ಅರಣ್ಯ ಇಲಾಖೆ ವಸತಿ ಗೃಹಕ್ಕೆ ಜಾಗ ಮಂಜೂರು ಮಾಡಿರುವದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ತೆರ್ಮೆಮೊಟ್ಟೆಯಲ್ಲಿ ಸರ್ವೆ ಸಂ 350/1ರಲ್ಲಿ 9 ಎಕರೆ ಪೈಸಾರಿ ಜಾಗವಿದೆ. ಇದನ್ನು ಗ್ರಾ.ಪಂ. ಈ ಹಿಂದೆ ನಿವೇಶನ ರಹಿತರಿಗೆ ನಿವೇಶನ, ಆಟದ ಮೈದಾನ ಇತ್ಯಾದಿ ಅಭಿವೃದ್ಧಿ ಕೆಲಸಕ್ಕೆ ನಿರ್ಣಯ ಮಾಡಿತ್ತು. ಆದರೆ ಈ ನಡುವೆ ಅರಣ್ಯ ಇಲಾಖೆಯ ವಸತಿ ಗೃಹಕ್ಕೆ ಜಾಗ ಮಂಜೂರಾತಿಯನ್ನು ತಾಲೂಕು ಆಡಳಿತ ನೀಡಿರುವದನ್ನು ಖಂಡಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಇಲ್ಲಿ 141 ಜನ ನಿವೇಶನ ರಹಿತರಿಗೆ ನಿವೇಶನ, ಒಂದು ಜಿಮ್ ಕೇಂದ್ರ, ಸಮುದಾಯ ಭವನ, ಸಾರ್ವಜನಿಕ ಆಟದ ಮೈದಾನಕ್ಕೆ ಗ್ರಾ.ಪಂ. ಕ್ರಿಯಾ ಯೋಜನೆ ರೂಪಿಸಿದೆ. ಗ್ರಾ.ಪಂ. ಇದರ ಮಂಜೂರಾತಿಗೆ ತಾಲೂಕು ತಹಶೀಲ್ದಾರ್‍ಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಜಾಗದಲ್ಲಿ ಗ್ರಾಮದ ಜನರ ಅನುಕೂಲಕ್ಕಾಗಿ ಸಾರ್ವಜನಿಕ ಸ್ಮಶಾನಕ್ಕೆ ಕಾದಿರಿಸಲು ಸರ್ವೆ ನಡೆಸಲಾಗಿದೆ. ಆದರೆ ಅಕ್ಟೋಬರಿನಲ್ಲಿ ರೆವಿನ್ಯೂ ಇಲಾಖೆಯು ಅರಣ್ಯ ಇಲಾಖೆಗೆ ಅದೇ ಜಾಗದಲ್ಲಿ ವಸತಿ ಗೃಹ ನಿರ್ಮಾಣಕ್ಕೆ ಜಾಗ ನೀಡಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾ.ಪಂ. ಕಾದಿರಿಸಿದ ಜಾಗದಲ್ಲಿ ಅರಣ್ಯ ಇಲಾಖೆ ವಸತಿ ಅಗತ್ಯವೇನು ಎಂದು ಪ್ರಶ್ನೆ ಮಾಡಿದ್ದಾರೆ. ಅರಣ್ಯ ಇಲಾಖೆಗೆ ಬೇಕಾದಷ್ಟು ತನ್ನದೆ ಜಾಗ ಇದ್ದು ಅಲ್ಲಿ ವಸತಿ ನಿರ್ಮಿಸಲಿ, ನಮ್ಮ ಗ್ರಾಮದ ಜಾಗ ಮಂಜೂರಾತಿ ಖಂಡನೀಯ ಎಂದು ಹೇಳಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಈಗಾಗಲೇ ಅಲ್ಲಿ ಜೆಸಿಬಿ ಬಳಸಿ ನೆಲ ಸಮತಟ್ಟುಗೊಳಿಸುವ ಕೆಲಸ ಮಾಡಿದೆ.

ಈ ವಿಚಾರವಾಗಿ ಗ್ರಾ.ಪಂ. ಅಧ್ಯಕ್ಷೆ ರೋಹಿಣಿ ಮಾತನಾಡಿ, ಗ್ರಾಮಸ್ಥರಿಗೆ ಅವರ ಬೇಡಿಕೆಯಂತೆ ತಾಲೂಕು ತಹಶೀಲ್ದಾರ್, ತಾ.ಪಂ.ಗೆ ನಿರ್ಣಯ ಮಾಡಿ ಗ್ರಾಮದ ಜನರ ಅಗತ್ಯತೆಗೆ ಬಳಸಲು ಕೋರಿದೆ. ಆದರೆ ಅದನ್ನು ಕಾರ್ಯಗತಗೊಳಿಸದೆ ಈ ನಡುವೆ ಅರಣ್ಯ ಇಲಾಖೆಗೆ ಸ್ಥಳ ಮಂಜೂರಾತಿ ಮಾಡಿರುವದು ವಿಷಾದನೀಯ. ಈ ನಿಟ್ಟಿನಲ್ಲಿ ಇಂದೆ ತಾಲೂಕು ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಚರ್ಚಿಸುವದಾಗಿ ಹೇಳಿದರು.

ಅದರಂತೆ ಗ್ರಾ.ಪಂ. ಆಡಳಿತ ವರ್ಗದ ನಿಯೋಗ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಗೋವಿಂದರಾಜು ಮತ್ತು ತಾಲೂಕು ಕಚೇರಿಯಲ್ಲಿಯೇ ಇದ್ದ ಜಿಲ್ಲಾ ಉಪವಿಭಾಗಧಿಕಾರಿ ಜವರೇಗೌಡರನ್ನು ಬೇಟಿಯಾದಾಗ, ಅವರು ಪರಿಶೀಲನೆ ನಡೆಸಿದಾಗ ಅರಣ್ಯ ಇಲಾಖೆ ಭೂ ಮಂಜುರಾತಿ ಆಗಿರುವದಕ್ಕೆ ಸಮರ್ಪಕವಾದ ದಾಖಲೆ ಕಂಡುಬಂದಿಲ್ಲ ಹೀಗಿರುವಾಗ ಇಲಾಖೆ ಹೇಗೆ ಕೆಲಸ ಮಾಡುತ್ತಿದೆ. ಅಲ್ಲಿ ಭೂ ಮಂಜೂರಾತಿ ಮಾಡಿದೆ ಎಂದರೂ ಸಮರ್ಪಕ ದಾಖಲೆ ಇಲ್ಲದ ಕಾರಣ ಅನಧಿಕೃತ ಕೆಲಸ ವನ್ನು ಇಲಾಖೆ ನಿಲ್ಲಿಸಲು ಸೂಚಿಸುವಂತೆ ತºಶೀಲ್ದಾರ್‍ಗೆ ಸೂಚಿಸಿ ಹಾಗೂ ಗ್ರಾ.ಪಂ. ಕೋರಿಕೆಯನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆಯನ್ನು ಜವರೇಗೌಡ ನೀಡಿದರು.

- ರಂಜಿತಾ