ಸೋಮವಾರಪೇಟೆ, ಜ.17: ಆಸ್ತಿ ವೈಷಮ್ಯದ ಹಿನ್ನೆಲೆ ವ್ಯಕ್ತಿಯೋರ್ವ ಗುಂಡು ಹಾರಿಸಿದ ಘಟನೆ ತಾಲೂಕಿನ ಕೊತ್ನಳ್ಳಿ ಗ್ರಾಮದ ನಾಡ್ನಳ್ಳಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೋರ್ವರು ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಡ್ನಳ್ಳಿ ಗ್ರಾಮದ ಕುಟ್ಟಪ್ಪ ಎಂಬವರ ಪುತ್ರ ಉಪೇಂದ್ರ ಎಂಬಾತ ಆಸ್ತಿ ವೈಷಮ್ಯದ ಹಿನ್ನೆಲೆ ತನ್ನ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಿದ್ದಾನೆ ಎಂದು ಅದೇ ಗ್ರಾಮದ ಗುರುಪ್ರಸಾದ್ ಅವರ ಪತ್ನಿ ಸೌಜನ್ಯ ಎಂಬವರು ನೀಡಿದ ದೂರಿನ ಹಿನ್ನೆಲೆ ಆರೋಪಿಯನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ನಾಡ್ನಳ್ಳಿ ಗ್ರಾಮದ ತನ್ನ ಮನೆಯಲ್ಲಿದ್ದ ಸಂದರ್ಭ ಕೋವಿಯೊಂದಿಗೆ ಆಗಮಿಸಿದ ಉಪೇಂದ್ರ ತನ್ನತ್ತ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಗುರಿ ತಪ್ಪಿದ್ದರಿಂದ ಪ್ರಾಣಾಪಾಯದೊಂದಿಗೆ ಪಾರಾಗಿರುವದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣದ ತನಿಖೆ ಕೈಗೊಂಡ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಆರೋಪಿ ಉಪೇಂದ್ರನನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.