ಸುಂಟಿಕೊಪ್ಪ, ಜ. 17: ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಇಲ್ಲದೆ ಸಾರ್ವಜನಿಕ ಕೆಲಸಗಳಲ್ಲಿ ಹಿನ್ನಡೆಯಾಗಿದೆ ಎಂದು ಆ ಭಾಗದ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ 5 ಮಂದಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಬಂದು ವರ್ಗಾವಣೆಯಾಗಿದ್ದಾರೆ. ಮಾದಾಪುರ ಗ್ರಾ.ಪಂ.ಗೆ ಪಿ.ಡಿ.ಓ. ಇಲ್ಲದೆ ಕಚೇರಿ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ತಿಳಿದು ಬಂದಿದೆ.

ಮಾದಾಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ ಅನಂತರ ಪಿಡಿಓ ಆಗಿ ಬಡ್ತಿಹೊಂದಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಚಂಗಪ್ಪ ನಿವೃತ್ತರಾದ ನಂತರ ವೇಣುಗೋಪಾಲ, ರಾಜನ್, ಶ್ಯಾಮ್, ಸತೀಶ್‍ಕುಮಾರ್, ಗಣಪತಿ, ಪರಮೇಶ್ ಇಲ್ಲಿ ಸೇವೆ ಸಲ್ಲಿಸಿದ್ದರು. 4 ತಿಂಗಳ ಹಿಂದೆ ಪಿ.ಡಿ.ಓ. ಆಗಿ ಬಂದ ಮಧು ವಗಾವಣೆ ಮಾಡಿಸಿಕೊಂಡು ತೆರಳಿದ್ದಾರೆ.

2015-16 ನೇ ಸಾಲಿನಿಂದ ಆಡಳಿತ ಮಂಡಳಿ ರಚನೆಯಾದ ನಂತರ ಸದಸ್ಯರುಗಳ ಸಮನ್ವಯ ಕೊರತೆ ಆಡಳಿತದಲ್ಲಿ ದೂರ ದೃಷ್ಟಿ ಇಲ್ಲದೆ ಇರುವದರಿಂದ ಆಶ್ರಯ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳು ನಿರೀಕ್ಷಿತ ಮಟ್ಟ ತಲಪಲಿಲ್ಲ ಎನ್ನುವ ಅಸಮಾಧಾನ ಈ ಭಾಗದ ಜನತೆಯದ್ದಾಗಿದೆ.