ಮಡಿಕೇರಿ, ಜ. 16: ಕೊಡಗಿನ ಅಭಿವೃದ್ಧಿಗೆ ಕೊಡವ ಡೋಂಗಿ ಪರಿಸರವಾದಿಗಳು ಅಡ್ಡಿಯಾಗಿದ್ದಾರೆ ಎಂದು ಆರೋಪಿಸಿರುವ ಸೇವ್ ಕೊಡಗು ಆಂದೋಲನ ವೇದಿಕೆ, ಜನರಲ್ಲಿ ಜಾಗೃತಿ ಮೂಡಿಸುವದಕ್ಕಾಗಿ ಫೆ.11 ರಂದು ಗೋಣಿಕೊಪ್ಪದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಿರುವದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖ ಮಧು ಬೋಪಣ್ಣ, ಡೋಂಗಿ ಪರಿಸರ ವಾದಿಗಳ ವಿರುದ್ಧ ಜನಾಂದೋಲನ ರೂಪಿಸುವದಕ್ಕಾಗಿ ಜಾತ್ಯತೀತ ಮತ್ತು ಪಕ್ಷತೀತವಾಗಿ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.ಫೆ.11 ರಂದು ಗೋಣಿಕೊಪ್ಪದಲ್ಲಿ ಎಲ್ಲರೂ ಸೇರಿ ಬೃಹತ್ ರ್ಯಾಲಿಯನ್ನು ನಡೆಸುವದಲ್ಲದೆ, ಪ್ರತಿಭಟನಾ ಸಭೆಯಲ್ಲಿ ಡೋಂಗಿ ಪರಿಸರವಾದಿಗಳ ವಿರುದ್ಧ ನಿರ್ಣಯ ಕೈಗೊಳ್ಳುವದಾಗಿ ಹೇಳಿದರು.
ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ನಡೆಸುತ್ತಿರುವ ಕಾರ್ಯಚಟುವಟಿಕೆಗಳು ಜನವಿರೋಧಿಯಾಗಿದ್ದು, ಕೊಡಗಿನ ಜನರ ಅಳಿವು, ಉಳಿವಿನ ಪ್ರಶ್ನೆ ಉದ್ಭವಿಸಿದೆ. ಮೇಲ್ವರ್ಗದ ವಿದೇಶಿ ಡೋಂಗಿ ಪರಿಸರವಾದಿಗಳ ಏಜೆಂಟ್ಗಳಂತೆ ವರ್ತಿಸುತ್ತಿರುವ ಕೊಡಗಿನ ಡೋಂಗಿ ಪರಿಸರ ವಾದಿಗಳು ಹಣ ಮಾಡುವ ಏಕೈಕ ಉದ್ದೇಶದಿಂದ ಎಲ್ಲಾ ಜನಪರ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಮೊದಲೇ ಹಣ ಪಡೆದು ಹೊಂದಾಣಿಕೆ ಮಾಡಿಕೊಂಡಿರುವ ದರಿಂದ ಪರಿಸರ ಪರವಾದ ಯೋಜನೆಗಳಿಗೆ ಆದ್ಯತೆ ನೀಡಿ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಮಧು ಬೋಪಣ್ಣ ಆರೋಪಿಸಿದರು.
ಕುಶಾಲನಗರದ ವರೆಗೂ ರೈಲ್ವೇ ಯೋಜನೆ ಬಾರದಂತೆ ತಡೆಯ ಲಾಗುತ್ತಿದೆ. ಚತುಷ್ಪಥ ರಸ್ತೆಯನ್ನು ವಿರೋಧಿಸಿ ಇತ್ತೀಚಿಗೆ ಪರಿಸರ ವಾದಿಗಳು ಮಡಿಕೇರಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬೆಂಗಳೂರು, ಮೈಸೂರು, ಕೇರಳ ಮತ್ತು ತಮಿಳುನಾಡು ಜನರನ್ನು ಕರೆತರಲಾಗಿತ್ತು. ಡಾ.ಕಸ್ತೂರಿ ರಂಗನ್ ವರದಿ ವಿಚಾರದಲ್ಲೂ ಪರಿಸರ ವಾದಿಗಳ ಕೈವಾಡವಿದೆ. ಮೂರು ವನ್ಯಧಾಮ ವ್ಯಾಪ್ತಿಯನ್ನು ಸೂಕ್ಷ್ಮ ಪರಿಸರ ತಾಣವೆಂದು ಘೋಷಿಸಿದರೆ ಕೊಡಗಿನ ಅಭಿವೃದ್ಧಿ ಸಾಧ್ಯವೇ ಇಲ್ಲವೆಂದು ಆರೋಪಿಸಿದ ಮಧು ಬೋಪಣ್ಣ ಕೊಡಗಿನ ನೆಮ್ಮದಿ ಹಾಳಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾ ಸ್ವಾತಂತ್ರ್ಯವನ್ನು ಕೂಡ ಕಸಿದುಕೊಂಡಿರುವ ಡೋಂಗಿ ಪರಿಸರವಾದಿಗಳು ಕೊಡಗಿನ ಮುಗ್ಧ ಕೊಡವರನ್ನು ಹಾದಿ ತಪ್ಪಿಸುತ್ತಿದ್ದಾರೆ. ರಾಷ್ಟ್ರಪತಿಗಳು ಅಂಕಿತ ಹಾಕಿದ್ದರೂ ಬಾಣೆ ಜಮೀನಿನ ಅಧಿಕಾರ ಕೊಡಗಿನ ಜನರ ಪಾಲಾಗಲಿಲ್ಲ. ಇದಕ್ಕೆ ಡೋಂಗಿ ಪರಿಸರವಾದಿಗಳ ಷಡ್ಯಂತ್ರವೇ ಕಾರಣವೆಂದು ಮಧು ಬೋಪಣ್ಣ ಆರೋಪಿಸಿದರು.
ಕೊಡಗಿನಲ್ಲಿ ಸುರಿಯುವ ಮಳೆನೀರು ಮತ್ತು ಕಾವೇರಿ ನದಿಯ ನೀರಿನ ಲಾಭ ಪಡೆಯುತ್ತಿರುವ ಜಿಲ್ಲೆಗಳು ಹಾಗೂ
(ಮೊದಲ ಪುಟದಿಂದ) ರಾಜ್ಯಗಳು ಕೊಡಗಿಗೆ ಗೌರವಧನ ನೀಡಬೇಕು ಎನ್ನುವ ಬೇಡಿಕೆ ಮುಂದಿಟ್ಟಕೊಂಡು ಮುಂದಿನ ದಿನಗಳಲ್ಲಿ ಹೋರಾಟವನ್ನು ರೂಪಿಸುವದಾಗಿ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ ಮಾತನಾಡಿ ಡೋಂಗಿ ಪರಿಸರವಾದಿಗಳು ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬಳಸಿ ಕೊಡಗನ್ನು ಬಲಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಮಂತ್ರಿಮಂಡಲಕ್ಕೆ ಸಾವಿರಾರು ಇ-ಮೇಲ್ಗಳನ್ನು ರವಾನಿಸಿ ಕೊಡಗಿನಲ್ಲಿ ಅಭಿವೃದ್ಧಿ ಕಾರ್ಯ ಬೇಡವೆಂದು ಒತ್ತಡ ಹೇರುತ್ತಿದ್ದಾರೆ. ಅಲ್ಲದೆ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನ ಬಿಡುಗಡೆಯಾಗದಂತೆ ತಡೆಯುವಲ್ಲಿಯೂ ಯಶಸ್ವಿ ಯಾಗುತ್ತಿದ್ದಾರೆ. ಬ್ರಹ್ಮಗಿರಿಯಿಂದ ಪುಷ್ಪಗಿರಿಯ ವರೆಗಿನ ಗ್ರಾಮಗಳಲ್ಲೆ ಕೊಡಗಿನ ಸಂಸ್ಕøತಿ ಮತ್ತು ದೇವರ ಕಾಡು ಉಳಿದುಕೊಂಡಿವೆ. ಈ ಪ್ರದೇಶವನ್ನೆ ಡಾ. ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ತರುವ ಪ್ರಯತ್ನ ನಡೆಯುತ್ತಿದೆ. ಆದರೆ ಪರಿಸರ ವಾದಿಗಳು ವಾಸಿಸುತ್ತಿರುವ ಪ್ರದೇಶದಲ್ಲಿ ದೇವರಕಾಡು ಎಲ್ಲಿದೆ ಎಂದು ಮನುಮುತ್ತಪ್ಪ ಪ್ರಶ್ನಿಸಿದರು.
ಜಿಲ್ಲೆಯಲ್ಲಿ ವೈಜ್ಞಾನಿಕ ರೂಪದ ಎಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಕುಶಾಲನಗರದವರೆಗೆ ರೈಲು ಮಾರ್ಗ ಬರಬೇಕು ಎಂದು ಅವರು ಒತ್ತಾಯಿಸಿದರು.
ಗೋಣಿಕೊಪ್ಪದಲ್ಲಿ ನಡೆಯುವ ರ್ಯಾಲಿಗೆ ನಮ್ಮ ಬೆಂಬಲವಿದೆ ಎಂದು ಘೋಷಿಸಿದರು.
ಬಿಜೆಪಿಯ ವಿರಾಜಪೇಟೆ ತಾಲೂಕು ಅಧ್ಯಕ್ಷ ಅರುಣ್ ಭೀಮಯ್ಯ ಮಾತನಾಡಿ, ಕಳೆದ 23 ವರ್ಷಗಳಿಂದ ರೈಲು ಮಾರ್ಗಕ್ಕಾಗಿ ಹೋರಾಟ ನಡೆಸುತ್ತಾ ಬರಲಾಗಿದೆ. ಆದರೆ ಪರಿಸರವಾದಿಗಳ ಷಡ್ಯಂತ್ರದಿಂದಾಗಿ ಇಲ್ಲಿಯವರೆಗೆ ಈ ಯೋಜನೆ ಕಾರ್ಯಗತವಾಗಿಲ್ಲ ಎಂದು ಆರೋಪಿಸಿದರು.
ದಕ್ಷಿಣ ಕೊಡಗಿಗೂ ರೈಲು ಮಾರ್ಗದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು ರೈಲು ಸಂಚಾರದಿಂದ ಪರಿಸರಕ್ಕೆ ಹಾನಿಯಾಗುವದಿಲ್ಲವೆಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟುಮೊಣ್ಣಪ್ಪ ಮಾತನಾಡಿ, ಗೋಣಿಕೊಪ್ಪಲಿನಲ್ಲಿ ನಡೆಯುವ ಪ್ರತಿಭಟನಾ ಸಭೆಗೆ ಬೆಂಬಲ ಸೂಚಿಸಿದರು.
ಬೇಡಿಕೆಗಳು: ಡೋಂಗಿ ಪರಿಸರವಾದಿಗಳನ್ನು ಕೊಡಗಿನಿಂದ ಗಡಿಪಾರು ಮಾಡಬೇಕು, 2013ರ ರಾಷ್ಟ್ರಪತಿ ಅಂಕಿತ ಭೂ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು, ಕೊಡಗಿನ ಎಲ್ಲಾ ಬಾಣೆ ಜಮೀನುಗಳನ್ನು ಕಂದಾಯಕ್ಕೆ ಒಳಪಡಿಸಿ ಪರಾಧೀನ ವೆಂದು ಘೋಷಿಸಬೇಕು, ಕೊಡಗನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಡಾ.ಕಸ್ತೂರಿ ರಂಗನ್ ವರದಿ ಮತ್ತು ಸೂಕ್ಷ್ಮ ಪರಿಸರ ವಲಯದಿಂದ ಕೊಡಗಿನ ಜನ ವಸತಿ ಪ್ರದೇಶ ಮತ್ತು ಬಾಣೆ ಹಿಡುವಳಿಗಳನ್ನು ಹೊರಗಿಡ ಬೇಕು, ಅಕ್ರಮವಾಗಿ ಜಾಗ ಖರೀದಿಸಿ ರೆಸಾರ್ಟ್ ನಿರ್ಮಿಸುತ್ತಿರುವ ಪರಿಸರವಾದಿ ಗುಂಪಿನ ಭೂ ಮಾಫಿಯಾಗಳನ್ನು ಗಡಿಪಾರು ಮಾಡಬೇಕು, ಪ್ರವಾಸೋದ್ಯಮದಲ್ಲಿ ಕೊಡಗಿನವರಿಗೆ ಆದ್ಯತೆ ನೀಡಿ ಆರ್ಥಿಕ ಪುಶ್ಚೇತನಕ್ಕೆ ಸಹಕಾರ ನೀಡಬೇಕು, ಕಾಡಾನೆ ಹಾವಳಿಯನ್ನು ತಪ್ಪಿಸಲು ಅರಣ್ಯ ಪ್ರದೇಶದ ಸುತ್ತಲು ಕಂದಕ ರೂಪಿಸಿ ರೈಲ್ವೆ ಹಳಿ ಬೇಲಿ ನಿರ್ಮಿಸಬೇಕು ಎಂದು ಪ್ರತಿಭಟನಾ ರ್ಯಾಲಿಯಲ್ಲಿ ಒತ್ತಾಯಿಸುವದಾಗಿ ಪ್ರಮುಖರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖ ರಾದ ಬಿ.ಟಿ.ದಿನೇಶ್ ಹಾಗೂ ಪಾಣತ್ತಲೆ ವಿಶ್ವನಾಥ್ ಉಪಸ್ಥಿತರಿದ್ದರು.