ಸೋಮವಾರಪೇಟೆ, ಜ. 16: ಪುಷ್ಪಗಿರಿ ತಪ್ಪಲಿನ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ ಇತಿಹಾಸ ಪ್ರಸಿದ್ಧ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವರ 60ನೇ ವರ್ಷದ ವಾರ್ಷಿಕ ಮಹಾರಥೋತ್ಸವ ಸಹಸ್ರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ, ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಇಂದು ವೈಭವಯುತವಾಗಿ ನೆರವೇರಿತು
ಕಡೂರಿನ ಗೊಂಬೆ ಕುಣಿತ, ನಾದಸ್ವರದೊಂದಿಗೆ ಗ್ರಾಮದ ರಥಬೀದಿಯಲ್ಲಿ ಅಲಂಕೃತ ರಥದಲ್ಲಿ ಶ್ರೀ ಕುಮಾರಲಿಂಗೇಶ್ವರ ದೇವರ ಮೆರವಣಿಗೆ ನಡೆಸಲಾಯಿತು. ನೂರಾರು ಮಂದಿ ಭಕ್ತಾದಿಗಳು ರಥವನ್ನೆಳೆದರು. ಕಳೆದ ತಾ.13ರ ಬೆಳ್ಳಿ ಬಂಗಾರ ದಿನದಂದು ಪ್ರಾರ್ಥನಾ ಪೂಜೆಯೊಂದಿಗೆ ವಿಧ್ಯುಕ್ತ ಚಾಲನೆಗೊಂಡಿರುವ ಪ್ರಸಕ್ತ ವರ್ಷದ ಜಾತ್ರೆಗೆ ತಾ.17ರಂದು(ಇಂದು) ತೆರೆಬೀಳಲಿದೆ. ಜಾತ್ರೆ ಪ್ರಯುಕ್ತ ದೇವಾಲಯದಲ್ಲಿ ಕರುವಿನ ಹಬ್ಬ, ಗರುಡಗಂಬದಲ್ಲಿ ತುಪ್ಪದ ನಂದಾದೀಪ ಬೆಳಗುವದು, ಪುಷ್ಪಗಿರಿ ಬೆಟ್ಟದಲ್ಲಿರುವ ಪುರಾತನ ದೇವಾಲಯದಲ್ಲಿ ದೀಪೋತ್ಸವ, ಅರಸುಬಲ ಸೇವೆ ಸೇರಿದಂತೆ ಪ್ರತಿದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದ್ದು, ಇಂದು ಮಹಾರ ಥೋತ್ಸವ ವಿಜ್ರಂಭಣೆಯೊಂದಿಗೆ ಶ್ರದ್ಧಾಭಕ್ತಿಯಲ್ಲಿ ಜರುಗಿತು.
(ಮೊದಲ ಪುಟದಿಂದ) ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ದೇವಾಲಯದ ಪ್ರಧಾನ ಅರ್ಚಕ ರಮೇಶ್ ಹೆಗಡೆ ನೇತೃತ್ವದ ತಂಡದವರಿಂದ ಬೆಳಗ್ಗಿನಿಂದಲೇ ಪೂಜಾ ವಿಧಿ ವಿಧಾನಗಳು ನಡೆದವು. ನಿರಂತರವಾಗಿ ಅನಾದಿಕಾಲ ದಿಂದಲೂ ನಡೆದು ಬಂದ ಪದ್ಧತಿಯ ಮೇರೆ ಕೂತಿ ನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತರೆಶೆಟ್ಟಳ್ಳಿ ಗ್ರಾಮಸ್ಥರು ಸೇರಿದಂತೆ, ಹೊರ ಜಿಲ್ಲೆಯ ನೂರಾರು ಮಂದಿ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಜಿ.ಎಸ್. ರಘುಕುಮಾರ್, ಉಪಾಧ್ಯಕ್ಷ ಕೆ.ಟಿ. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಕೆ. ಪರಮೇಶ, ಖಜಾಂಚಿ ಡಿ.ಎಸ್. ಲಿಂಗರಾಜು, ಸಹ ಕಾರ್ಯದರ್ಶಿ ದಿವ್ಯಕುಮಾರ್, ಕಾರ್ಯನಿರ್ವ ಹಣಾಧಿಕಾರಿ ಕೆ.ಪಿ. ಚಂಗಪ್ಪ, ಧರ್ಮದರ್ಶಿಗಳೊಂದಿಗೆ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಪ್ರಮುಖ ರುಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿ ದ್ದರು.
ಜಾತ್ರೋತ್ಸವದ ಅಂಗವಾಗಿ ತಾಲೂಕಿನ ಕೃಷಿ ಇಲಾಖೆ, ತೋಟಗಾರಿಕೆ, ಸಂಬಾರ ಮಂಡಳಿ ವತಿಯಿಂದ ರೈತರು ಬೆಳೆದ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸ್ಥಳೀಯ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಅಂತರ ಜಿಲ್ಲಾ ಮಟ್ಟದ ಪುರುಷರ ಮುಕ್ತ ಕಬಡ್ಡಿ ಮತ್ತು ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದವು.
ಜಾತ್ರೆಯನ್ನು ಈ ವ್ಯಾಪ್ತಿಯ ಜನತೆ ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಉದ್ಯೋಗ ಸೇರಿದಂತೆ ಇನ್ನಿತರ ಕಾರ್ಯ ನಿಮಿತ್ತ ಹೊರಭಾಗದಲ್ಲಿ ನೆಲೆಸಿರುವ ಮಂದಿಯೂ ಸಹ ಈ ಜಾತ್ರೆಯಲ್ಲಿ ಒಟ್ಟಾಗುವದರಿಂದ ಇಡೀ ಗ್ರಾಮವೇ ಸಂಭ್ರಮದಲ್ಲಿರುತ್ತದೆ. ಇದರೊಂದಿಗೆ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸುವ ಮೂಲಕ ಎಲ್ಲರನ್ನೂ ಒಂದುಗೂಡಿ ಸುವ ಪ್ರಯತ್ನ ದೇವಾಲಯ ಆಡಳಿತ ಮಂಡಳಿ ಹಾಗೂ ಶ್ರೀಕುಮಾರ ಲಿಂಗೇಶ್ವರ ಯುವಕ ಸಂಘದಿಂದ ಪ್ರತಿವರ್ಷ ನಡೆಯುತ್ತಿದೆ.
ಚೋಳರ ಕಾಲದ ದೇವಾಲಯ: ಕುಮಾರಲಿಂಗೇಶ್ವರ ದೇವಾಲಯವು ಚೋಳ ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು ಸಂಪೂರ್ಣವಾಗಿ ಬೃಹತ್ ಕಲ್ಲುಗಳ ಜೋಡಣೆಯಿದೆ. ಶ್ರೀ ಕ್ಷೇತ್ರವು ಸೋಮವಾರಪೇಟೆ ನಗರದಿಂದ 10 ಕಿ.ಮಿ. ದೂರದಲ್ಲಿದ್ದು, ಪ್ರಕೃತಿ ಸೌಂದರ್ಯದ ನಡುವೆ ನೆಲೆ ನಿಂತಿರುವ ಪುಷ್ಪಗಿರಿ ಸಮೀಪದ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ ಮತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಮಾರ್ಗಮಧ್ಯೆ ಶ್ರೀಕುಮಾರ ಲಿಂಗೇಶ್ವರ ದೇವಾಲಯ ನೆಲೆಯಾಗಿದೆ.
ಕಳೆದ 6 ದಶಕಗಳಿಂದ ಪ್ರತಿ ವರ್ಷ ಮಕರ ಸಂಕ್ರಾಂತಿಯ ಸಂದರ್ಭ ದೇವಾಲಯದಲ್ಲಿ ರಥೋತ್ಸವ ಹಾಗೂ 1 ವಾರಗಳ ತನಕ ಧಾರ್ಮಿಕ ವಿಧಿ ವಿಧಾನಗಳಂತೆ ದೇವರ ಪೂಜೆ ಉತ್ಸವಗಳು ನಡೆಯುತ್ತವೆ. ಸಾವಿರಾರು ಮಂದಿ ಭಕ್ತಾದಿಗಳು ಶ್ರೀ ಕುಮಾರಲಿಂಗೇಶ್ವರ ದೇವಾಲಯಕ್ಕೆ ಆಗಮಿಸಿ ಫಲ ತಾಂಬೂಲ, ದವಸ ಧಾನ್ಯ, ಕಾಣಿಕೆ, ಹರಕೆಗಳನ್ನು ಸಲ್ಲಿಸುತ್ತಾರೆ.
-ವಿಜಯ್ ಹಾನಗಲ್