ಮಡಿಕೇರಿ, ಜ. 14: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಹಾಗೂ ಪಶು ಸಂಗೋಪನಾ ಇಲಾಖೆ ಸಹಯೋಗ ದೊಂದಿಗೆ ಕೊಡಗು ಪುನಶ್ಚೇತನಕ್ಕಾಗಿ ಏರ್ಪಡಿಸಿದ್ದ ಕೊಡಗು ಪ್ರವಾಸಿ ಉತ್ಸವದ ಕೊನೆಯ ದಿನದ ಕಾರ್ಯ ಕ್ರಮಗಳು ಜನಮನಸೂರೆಗೊಂಡವು.

ಅರೆಭಾಷೆ ಅಕಾಡೆಮಿ ವತಿಯಿಂದ ಸಾಂಸ್ಕøತಿಕ ಕಾರ್ಯ ಕ್ರಮಗಳು ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಸಂಗೀತ ರಸ ಸಂಜೆ ನಡೆಯಿತು. ಗಾಂಧಿ ಮೈದಾನದ ಭವ್ಯವೇದಿಕೆಯಲ್ಲಿ ನಡೆದ ಕಾರ್ಯಕ್ರಮ ವೀಕ್ಷಣೆಗೆ ಕಲಾಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ರಾಜಾಸೀಟು ರಸ್ತೆ ಸೇರಿದಂತೆ ಗಾಂಧಿ ಮೈದಾನ ವ್ಯಾಪ್ತಿ ಯಲ್ಲಿ ಜನಸಾಗರವೇ ಕಂಡು ಬಂತು. ಕಲಾರಸಿಕರು ಶಿಳ್ಳೆ, ಚಪ್ಪಾಳೆಯೊಂದಿಗೆ ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂಭ್ರಮಿಸಿದರು. ಅರ್ಜುನ್ ಜನ್ಯ, ಸಂಚಿತ್ ಹೆಗ್ಡೆ, ಶ್ರೀನಿವಾಸ್, ವ್ಯಾಸರಾಜ್ ಇವರುಗಳ ಗಾಯನಕ್ಕೆ ಹೆಜ್ಜೆ ಹಾಕಿದ ಕಲಾಭಿಮಾನಿಗಳ ಹರ್ಷೊಲ್ಲಾಸ ಮಡಿಕೇರಿಯ ದಸರೆಯನ್ನು ನೆನಪಿಸುವಂತಿತ್ತು.

ಕಿವಿಗೆ ನಿರಾಶೆ !

ಕಾರ್ಯಕ್ರಮ ಅದ್ಧೂರಿಯಾಗಿ ಜನಜಂಗುಳಿಯೊಂದಿಗೆ ನಡೆಯಿತ್ತಾ ದರೂ ಅವ್ಯವಸ್ಥೆಗಳಿಂದಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಲಾಸಕ್ತರು ನಿರಾಶೆ ಅನುಭವಿಸುವಂತಾಯಿತು. ವೇದಿಕೆಯ ಎದುರಿನಲ್ಲಿ ಭಾರೀ ಗಾತ್ರದ ಸ್ಪೀಕರ್‍ಗಳೊಂದಿಗೆ ಸಂಗೀತದ ಸ್ವರಗಳ ಅಬ್ಬರವಿತ್ತು. ಆದರೆ ಹಿಂಭಾಗದಲ್ಲಿ ಕುಳಿತವರಿಗೆ ಏನೇನೂ ಕೇಳಿಸುತ್ತಿ ರಲಿಲ್ಲ. ಹಾಡುಗಳು ಕರ್ಕಶವಾಗಿ ಕೇಳಿಸುತ್ತಿದ್ದರೆ, ನಿರೂಪಕರು, ಹಾಡುಗಾರರು ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡುತ್ತಿದ್ದುದು ಕಿವಿಗೆ ಬೀಳುತ್ತಲೇ ಇರಲಿಲ್ಲ. ಹಾಗಾಗಿ ಎದುರಿಗಿರುವ ಪ್ರೇಕ್ಷಕರಲ್ಲಿ ಮಾತ್ರ ಸಂಭ್ರಮ ಕಂಡುಬಂದರೆ ಹಿಂದೆ ಕುಳಿತವರು ಮೂಕಪ್ರೇಕ್ಷಕರಾಗಿದ್ದರು. ಧ್ವನಿವರ್ಧಕದ ಸಮಸ್ಯೆಯಿಂದಾಗಿ ಅರ್ಜುನ್ ಜನ್ಯ ಕಾರ್ಯಕ್ರಮವನ್ನು ದಿಢೀರ್ ಆಗಿ ಅಂತ್ಯಗೊಳಿಸಿ, ವೇದಿಕೆಯಿಂದ ನಿರ್ಗಮಿಸಿದರು.

ಆಸನದ ಅವ್ಯವಸ್ಥೆ

ಅರ್ಜುನ್ ಜನ್ಯದಂತಹ ಸಂಗೀತ ನಿರ್ದೇಶಕರ ತಂಡ ಬರುತ್ತಿದೆ, ಕಲಾಸಕ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಲಿದ್ದಾರೆ ಎಂಬ ಬಗ್ಗೆ ಆಯೋಜ ಕರಿಗೆ ಅರಿವಿದ್ದರೂ ಅದಕ್ಕೆ ಸರಿಯಾದ ಆಸನಗಳ ವ್ಯವಸ್ಥೆಗಳಿರಲಿಲ್ಲ. ಕಿಕ್ಕಿರಿದು ನೆರೆದಿದ್ದ ಜನರು ಅಲ್ಲಲ್ಲಿ ನಿಂತು ಕೊಂಡು ಬೆಟ್ಟದ ಮೇಲೇರಿ ಕಷ್ಟದಿಂದ ವೀಕ್ಷಿಸುವಂತಾಯಿತು. ಬೆಟ್ಟದ ಮೇಲಿಂದ ಯಾರಾದರೂ ಜಾರಿ ದ್ದಿದ್ದರೆ ಅಪಾಯವಿತ್ತು. ಅಲ್ಲಿ ಎದುರು ಭಾಗದಲ್ಲಿ ಗಣ್ಯರಿಗೆಂದು ಕೆಲವೇ ಆಸನ ವ್ಯವಸ್ಥೆ ಇದ್ದುದರಿಂದ ಆಮಂತ್ರಣ ಪತ್ರ ಹಿಡಿದು ತಂದಿದ್ದವರಿಗೂ ಸೀಟು ಸಿಗದೆ ಪೊಲೀಸರು ಹೈರಾಣಾಗ ಬೇಕಾಯಿತು.

ಸಣ್ಣಪುಟ್ಟ ಲೋಪಗಳ ನಡುವೆಯೂ ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ನಡೆದ ಮೂರು ದಿನಗಳ ಕೊಡಗು ಪ್ರವಾಸಿ ಉತ್ಸವ ಜನತೆಯ ನೆನಪಿನಲ್ಲಿ ಉಳಿಯುವಂತೆ ಮಾಡಿತು. ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರ ವೈಯಕ್ತಿಕ ಆಸಕ್ತಿಯಿಂದ ರೂಪುಗೊಂಡಿದ್ದ ಈ ಕಾರ್ಯಕ್ರಮ ಜನಮೆಚ್ಚುಗೆಯನ್ನು ಪಡೆಯಿತಲ್ಲದೆ, ಮನೋರಂಜನೆ ಗಳಿಂದ ವಂಚಿತವಾದ ಕೊಡಗಿನಲ್ಲಿ ವರ್ಷಂಪ್ರತಿ ಇಂತಹ ಉತ್ಸವಗಳು ಜಿಲ್ಲೆಯ ಬೇರೆ ಬೇರೆ ಊರುಗಳಲ್ಲಿ ನಡೆಯುವಂತಾಗಲಿ ಎಂಬ ಸಲಹೆಗಳೂ ಕೇಳಿ ಬಂದವು. ಕಾರ್ಯಕ್ರಮದ ರೂಪುರೇಷೆಗಳಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಹಕಾರ ನೀಡಿದ ಜಿಲ್ಲಾ ಹೊಟೇಲ್ ರೆಸಾರ್ಟ್ ಅಸೋಸಿಯೇಷನ್, ಕೂರ್ಗ್ ಟೂರ್ಸ್ ಆಂಡ್ ಟ್ರಾವಲ್ಸ್ ಸಂಸ್ಥೆ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಕೂರ್ಗ್ ಹೋಂ ಸ್ಟೇ ಸಂಸ್ಥೆಗಳ ಪರಿಶ್ರಮವೂ 3 ದಿನಗಳ ಕಾರ್ಯಕ್ರಮದಲ್ಲಿ ಪ್ರಶಂಸಿಸಲ್ಪಟ್ಟಿತು.