ಮಡಿಕೇರಿ, ಜ. 16: ಮಡಿಕೇರಿ ಮೂಲದ ಇಬ್ಬರು ವ್ಯಕ್ತಿಗಳು ಬಂದೂಕು ತೋಟಾಗಳನ್ನು ಕೇರಳ ಮೂಲದ ವ್ಯಕ್ತಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೇಳೆ ಪ್ರವಾಸಿ ಮಂದಿರದ ಬಳಿ ಮೂವರನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.
ಮಡಿಕೇರಿಯ ಬಂದೂಕು ಅಂಗಡಿಗಳಿಂದ ಬಂದೂಕು ತೋಟಾಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಕೇರಳ ಮೂಲದ ವ್ಯಕ್ತಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಧಾಳಿ ಮಾಡಿ ಅರ್ವತೋಕ್ಲು ಗ್ರಾಮದ ಪುತ್ತರೀರ ಪೂವಯ್ಯ, ಕೋಳುಮಾಡನ ಸಿ. ಸೂರಿ ಮತ್ತು ಕೇರಳದ ಸುಲ್ತಾನ್ ಬತ್ತೇರಿಯ ಫ್ರಾನ್ಸಿಸ್ ಎಂಬವರನ್ನು ಬಂಧಿಸಲಾಗಿದೆ.
ಆರೋಪಿತರಿಂದ ವಿವಿಧ ಕಂಪೆನಿಯ 263 ಬಂದೂಕು ತೋಟಾ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ಸುಮನ್ ಅವರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕ ಎಂ. ಮಹೇಶ್, ಸಿಬ್ಬಂದಿ ವಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ ಹಾಗೂ ಎಂ.ಎನ್. ನಿರಂಜನ್ ಭಾಗವಹಿಸಿದ್ದು, ಇವರ ಕಾರ್ಯವನ್ನು ಶ್ಲಾಘಿಸಿ ಪೊಲೀಸ್ ಅಧೀಕ್ಷಕರು ನಗದು ಬಹುಮಾನ ಘೋಷಿಸಿದ್ದಾರೆ.