ಮಡಿಕೇರಿ, ಜ. 14: ಇಲ್ಲಿನ ಮುತ್ತಪ್ಪ ದೇವಾಲಯ ಆವರಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇಂದು 29ನೇ ವರ್ಷದ ಮಕರ ಸಂಕ್ರಾಂತಿ ಉತ್ಸವವು ವಿಶೇಷ ದೈವಿಕ ಕೈಂಕರ್ಯಗಳೊಂದಿಗೆ ನೆರವೇರಿತು. ನಿನ್ನೆ ಸಂಜೆ ಸನ್ನಿಧಿಯಲ್ಲಿ ನಿರ್ಮಾಲ್ಯ ವಿಸರ್ಜನೆ, ಉಷಾಪೂಜೆ, ಗಣಹೋಮ ಹಾಗೂ ಶ್ರೀ ಮುತ್ತಪ್ಪ ಮತ್ತು ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ನಡೆಸಲಾಯಿತು.ಇಂದು ಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಷ್ಮಾಭಿಷೇಕ, ಎಳನೀರು ಅಭಿಷೇಕ, ಪುಷ್ಪಾರ್ಚನೆ ಯೊಂದಿಗೆ ಅಲಂಕಾರ ಪೂಜೆ ಜರುಗಿತು. ಅಲ್ಲದೆ ಶ್ರೀ ಅಯ್ಯಪ್ಪ ಉತ್ಸವ ಮೂರ್ತಿಯ ಕ್ಷೇತ್ರಪ್ರದಕ್ಷಿಣೆ ಯೊಂದಿಗೆ ಬಲಿಪೂಜೆಯ ಬಳಿಕ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಯಿತು. ಅನಂತರ ಭಕ್ತರಿಗೆ ಪ್ರಸಾದದೊಂದಿಗೆ ಅನ್ನಸಂತರ್ಪಣೆ ನೆರವೇರಿತು.

ಮಕರ ಸಂಕ್ರಾಂತಿ ಪ್ರಯುಕ್ತ ಮುಸ್ಸಂಜೆಯಲ್ಲಿ (ಮೊದಲ ಪುಟದಿಂದ) ವಿಶೇಷ ಭಜನಾ ಕಾರ್ಯಕ್ರಮದ ಬಳಿಕ ದೇವರಿಗೆ ಪಡಿಪೂಜೆ ಹಾಗೂ ದೀಪಾರಾಧನೆಯೊಂದಿಗೆ ರಾತ್ರಿ ಮಹಾಸೇವೆ ಬಳಿಕ ಪ್ರಸಾದ ವಿನಿಯೋಗ ನೆರವೇರಿತು. ದೇವರಿಗೆ ವಿಶೇಷ ಚಂಡೆ ಸೇವೆಯೊಂದಿಗೆ ಮಂಗಳವಾದ್ಯಗಳನ್ನು ಮಹಾಪೂಜೆ ವೇಳೆ ನುಡಿಸಲಾಯಿತು. ಪ್ರಮುಖರಾದ ಡಾ. ಎಂ.ಜಿ. ಪಾಟ್ಕರ್, ಎಸ್. ಸುರೇಶ್, ವಿನೋದ್, ಟಿ.ಎಸ್. ಪ್ರಕಾಶ್, ಉನ್ನಿಕೃಷ್ಣ, ಕೆ.ಕೆ. ಮಹೇಶ್, ಶಾರದಾ ರಾಮನ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಪೂಜೆ ಹಾಗೂ ಅನ್ನದಾನದಲ್ಲಿ ಪಾಲ್ಗೊಂಡಿದ್ದರು.

ಮಕರ ಜ್ಯೋತಿ ದರ್ಶನ

ಗೋಣಿಕೊಪ್ಪ : ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಹರಿಶ್ಚಂದ್ರಪುರ ಶ್ರೀ ಕಿಲೇರಿ ಮುತ್ತಪ್ಪ ಮಠಪುರದಲ್ಲಿ ಸ್ವಾಮಿ ಅಯ್ಯಪ್ಪ ಮಕರ ಜ್ಯೋತಿಯನ್ನು ಸಾರ್ವಜನಿಕರು ನೇರವಾಗಿ ವೀಕ್ಷಿಸಲು ನೇರ ಪ್ರಸಾರದ ಮೂಲಕ ಎಲ್‍ಇಡಿ ಪರದೆಯಲ್ಲಿ ಬಿತ್ತರಿಸಲಾಯಿತು. ಸಂಜೆ 5 ಗಂಟೆಯಿಂದ ಹರಿಶ್ಚಂದ್ರಪುರ ಶ್ರೀ ಕಿಲೇರಿ ಮುತ್ತಪ್ಪ ಮಠಪುರದಲ್ಲಿ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಜ್ಯೋತಿ ಬೆಳಗುವ ಸಮಯದವರೆಗೂ ಮುಂದುವರಿಯಿತು.

ಕೊಡಗು ಹಿಂದೂ ಮಲಯಾಳಿ ಸಮಾಜ ಅಧ್ಯಕ್ಷ ಶರತ್‍ಕಾಂತ್, ಗೌ. ಅಧ್ಯಕ್ಷ ಬಾಸ್ಕರ್, ಕಾರ್ಯದರ್ಶಿ ವಿ.ವಿ. ಅರುಣ್‍ಕುಮಾರ್, ಖಜಾಂಜಿ ಸುಬ್ರಮಣಿ, ಸದಸ್ಯ ರಾಜಶೇಖರ್ ಸೇರಿದಂತೆ ಸಮಾಜದ ನೂರಾರು ಸದಸ್ಯರು ಪಾಲ್ಗೊಂಡಿದ್ದರು. ಹಿರಿಯರಾದ ಶ್ರೀಜಾ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸಿದ್ದಾಪುರ: ಸಿದ್ದಾಪುರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.