ಮಡಿಕೇರಿ, ಜ. 14: ತಾ. 12 ರಂದು ತಡರಾತ್ರಿ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ನೆಲಜಿ ಗ್ರಾಮದ ಹೋಂಸ್ಟೇವೊಂದರಲ್ಲಿ ರೇವು ಪಾರ್ಟಿಯಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆರೋಪಿಗಳು ಷರತ್ತುಬದ್ಧ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.ಕಳೆದ ತಾ. 12 ರಂದು ತಡರಾತ್ರಿ ನಾಪೋಕ್ಲು ಬಳಿಯ ನೆಲಜಿ ಗ್ರಾಮದ ಹೋಂಸ್ಟೇವೊಂದರಲ್ಲಿ ರೇವು ಪಾರ್ಟಿ ನಡೆಸುತ್ತಿದ್ದ ಐವರು ಆರೋಪಿಗಳಲ್ಲಿ ಒಬ್ಬಾತ ಆ್ಯಕ್ಸಿಸ್ ಬ್ಯಾಂಕ್ ಆಡಳಿತಾಧಿಕಾರಿ ಮುಂಬೈನ ಪಶ್ಚಿಮ ಶಾಖೆಯ ಶಂಕರ್ (29) ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಇನ್ನೋರ್ವ ಆರೋಪಿ ಪಿ.ಜೂಡ್ ಪರೇರ (32) ಕೂಡ ಪೂನಾದ ಎಡಿಒ ಉದ್ದಿಮೆಯೊಂದರ ಮುಖ್ಯ ಹೆಚ್.ಆರ್.ಡಿ. ಅಧಿಕಾರಿಯಾಗಿದ್ದು, ಮತ್ತೋರ್ವ ಆರೋಪಿ ಬೆಂಗಳೂರು ಮತ್ತಿಕೆರೆಯ ಎ.ಸಿ. ಸರ್ವಿಸ್ ಇಂಜಿನಿಯರ್ ಆಗಿರುವ ಎಂ.ವಿ. ಈಶ್ವರ್ (33) ಎಂದು ಗೊತ್ತಾಗಿದೆ.
ಇನ್ನು ನಾಲ್ಕನೇ ಆರೋಪಿ ಬೆಂಗಳೂರು ಕೇಂಬ್ರಿಡ್ಜ್ ಬಡಾವಣೆಯಲ್ಲಿ ಪೈಂಟರ್ ಆಗಿದ್ದು, ಅಲ್ಲಿನ ನಿವಾಸಿ ಎಂ. ರಮೇಶ್ ಎಂಬವರ ಪುತ್ರ ಸಾಯಿರಾಮ್ ರಮೇಶ್ (24) ಎಂದು ತಿಳಿದು ಬಂದಿದೆ. ಅಲ್ಲದೆ ಜಾಗ ಮಾಲೀಕ ಎಂ.ಎ. ಅಪ್ಪಣ್ಣ ಹೋಂಸ್ಟೇ ನಡೆಸುವದರೊಂದಿಗೆ ಕೃಷಿಕನಾಗಿ ದ್ದಾನೆ. ಪೊಲೀಸ್ ಇಲಾಖೆಗೆ ಲಭಿಸಿರುವ ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಪ್ರಕರಣ ವಿವರ: ಜಿಲ್ಲೆಯ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ನೆಲಜಿ ಗ್ರಾಮದ ‘ನೆಲಜಿ ಎ-1 ಗ್ಲಾಂಪಿಂಗ್’ ಹೋಂಸ್ಟೇಯಲ್ಲಿ ರೇವು ಪಾರ್ಟಿಯನ್ನು ಆಯೋಜಿಸಿ ಹಲವು ಬಗೆಯ ಮಾದಕ ವಸ್ತುಗಳನ್ನು ರೇವು ಪಾರ್ಟಿಯಲ್ಲಿ ಸರಬರಾಜು ಮಾಡುತ್ತಿದ್ದ ಬಾಂಬೆ, ಪೂನಾ ಹಾಗೂ ಬೆಂಗಳೂರಿನ ವ್ಯಕ್ತಿಗಳನ್ನು ದಸ್ತಗಿರಿ ಮಾಡುವಲ್ಲಿ ಡಿಸಿಐಬಿ ಕೊಡಗು ಜಿಲ್ಲೆ ತಂಡ ಯಶಸ್ವಿಯಾಗಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮೊ.ಸಂ. 06/2019ಕಲಂ20(ಬಿ)(II) ಎನ್.ಡಿ.ಪಿ.ಎಸ್. ಕಾಯ್ದೆ ರೀತ್ಯ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿರುವ ಕೆಲವು ಹೋಂಸ್ಟೇಗಳಲ್ಲಿ ರೇವುಪಾರ್ಟಿಗಳನ್ನು ತಡರಾತ್ರಿ ನಡೆಸುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಅವರು ಇಂತಹ ರೇವು ಪಾರ್ಟಿಗಳನ್ನು ಹತ್ತಿಕ್ಕುವ ಬಗ್ಗೆ ಸದರಿ ರೇವು ಪಾರ್ಟಿ ಆಯೋಜನೆ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಧಾಳಿ ನಡೆಸುವಂತೆ ಜಿಲ್ಲಾ ಅಪರಾಧ ಪತ್ತೆದಳಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ ತಾ. 12 ರಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ‘ನೆಲಜಿ ಎ-1 ಗ್ಲಾಂಪಿಂಗ್’ ಹೋಂಸ್ಟೇಯಲ್ಲಿ ರೇವು ಪಾರ್ಟಿಯನ್ನು ಬಾಂಬೆ, ಪೂನಾ ಹಾಗೂ ಬೆಂಗಳೂರಿನ ಕೆಲವು ವ್ಯಕ್ತಿಗಳು, ಹೋಂಸ್ಟೇ ಮಾಲೀಕರೊಡನೆ ಶಾಮೀಲಾಗಿ ಆಯೋಜಿಸಿರುವ ಬಗ್ಗೆ ಮಾಹಿತಿ ಕಲೆಹಾಕಲಾಯಿತು. ಅಲ್ಲದೆ ಅಪರಾಧ ಪತ್ತೆ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರು, ಡಿಸಿಐಬಿ ಸಿಬ್ಬಂದಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ, ಎಎನ್ಎಸ್ ತಂಡದ ಓರ್ವ ಸಿಬ್ಬಂದಿಯ
(ಮೊದಲ ಪುಟದಿಂದ) ತಂಡ ರಚಿಸಿ ಧಾಳಿ ನಡೆಸಲಾಯಿತು. ಅದರಂತೆ ಈ ತಂಡ ಬಾಂಬೆಯ ಒಬ್ಬ ವ್ಯಕ್ತಿಯನ್ನು, ಪೂನಾದ ಒಬ್ಬ ವ್ಯಕ್ತಿಯನ್ನು ಹಾಗೂ ಬೆಂಗಳೂರಿನ ಇಬ್ಬರು ವ್ಯಕ್ತಿಗಳನ್ನು ಹಾಗೂ ಹೋಂಸ್ಟೇ ಮಾಲೀಕರನ್ನು ದಂಧೆಗೆ ಬಳಸಿದ ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 205.15 ಗಾಂಜಾ ಸೊಪ್ಪು, 29 ಗ್ರಾಂ ಚರಸ್, ಹುಕ್ಕ ಸೇದಲು ಉಪಯೋಗಿಸುವ 3 ಸಾಧನ, ಗಾಂಜಾ ಪುಡಿ ಮಾಡಲು ಉಪಯೋಗಿಸುವ 3 ಸಾಧನ, 2 ಅತೀ ಸಣ್ಣ ತೂಕದ ಸಾಧನ, 17 ಸಿಗರೇಟ್ ತಯಾರಿಸಲು ಉಪಯೋಗಿ ಸುವ ಪೇಪರ್ ಪ್ಯಾಕೆಟ್ ಮತ್ತು ಫಿಲ್ಟರ್, ಮೊಬೈಲ್ ಫೋನ್ಗಳು ಹಾಗೂ ಮಾದಕವಸ್ತು ಮಾರಾಟ ಮಾಡಿ ಇಟ್ಟುಕೊಂಡಿದ್ದ ಒಟ್ಟು ರೂ. 1,75,500 ನಗದು ವಶಪಡಿಸಿಕೊಳ್ಳ ಲಾಗಿದೆ. ಅಲ್ಲದೆ ರೇವು ಪಾರ್ಟಿಗೆ ಬಳಸಲಾಗುತ್ತಿದ್ದ ಲಕ್ಷಾಂತರ ಬೆಲೆಯ ಮ್ಯೂಸಿಕ್ ಸಿಸ್ಟಮ್, ಜನರೇಟರ್, ಅಶೋಕ ಲೈಲಂಡ್ ಮಿನಿ ಲಾರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆ ದಳದ ಪೊಲೀಸ್ ಇನ್ಸ್ಪೆಕ್ಟರ್ ಎಂ. ಮಹೇಶ್, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಎಂ. ನಂಜುಂಡಸ್ವಾಮಿ, ಸಿಬ್ಬಂದಿಯವರಾದ ಕೆ.ವೈ. ಹಮೀದ್, ಎಂ.ಎನ್. ನಿರಂಜನ, ಬಿ.ಎಲ್. ಯೋಗೇಶ್ಕುಮಾರ್, ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಶಿವರಾಜೇಗೌಡ, ದಿನೇಶ್ ಮತ್ತು ಎಎನ್ಎಸ್ ತಂಡದ ಅವಿನಾಶ್, ಸಿಡಿಆರ್ ಸೆಲ್ನ ರಾಜೇಶ್ ಹಾಗೂ ಗಿರೀಶ್ ಮತ್ತು ಚಾಲಕ ಶಶಿಕುಮಾರ್ ಭಾಗವಹಿಸಿ ದ್ದರು. ಈ ಪ್ರಕರಣವನ್ನು ಪತ್ತೆ ಹೆಚ್ಚಿನ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ನಗದು ಬಹುಮಾನ ಫೋಷಿಸಿದ್ದಾರೆ.
ಎಸ್ಪಿ ಸಲಹೆ : ಜಿಲ್ಲೆಯಾದ್ಯಂತ ಗಾಂಜಾ ಮಾರಾಟದ ಜಾಲ ಹಬ್ಬಿಕೊಂಡಿದ್ದು, ಯುವಕರನ್ನು ಮಾದಕ ವಸ್ತುಗಳ ಜಾಲದಲ್ಲಿ ಸೆಳೆದುಕೊಂಡು ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿರುವದು ತೀರ ಖಂಡನೀಯ. ಗಾಂಜಾ ಅಥವಾ ಯಾವದೇ ಮಾದಕ ವಸ್ತುಗಳ ಮಾರಾಟದ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಗ್ರಾಮದ ಬೀಟ್ ಅಧಿಕಾರಿಗಳಿಗಾಗಲೀ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಯ ಪಿಎಸ್ಐ ರವರಿಗಾಗಲೀ ದೂರು ನೀಡುವಂತೆ ಎಸ್ಪಿ ಸಲಹೆ ನೀಡಿ ದ್ದಾರೆ. ಅಲ್ಲದೆ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲೆಯ ಸುಮಾರು 30 ಕಡೆಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇರಿಸಿದ್ದು, ಯಾವದೇ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ನೀಡಬಹುದಾಗಿದೆ. ಮಾಹಿತಿ ನೀಡುವ ಸಾರ್ವಜನಿಕರು ತಮ್ಮ ಹೆಸರು ನಮೂದಿಸುವ ಅಗತ್ಯವಿರುವದಿಲ್ಲ. ಹೆಸರು ನಮೂದಿಸಿ ಮಾಹಿತಿ ನೀಡಿದ ಸಾರ್ವಜನಿಕರ ವಿವರವನ್ನು ಗೌಪ್ಯ ವಾಗಿಟ್ಟು ಅವರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವದು ಎಂದು ಪೊಲೀಸ್ ಅಧೀಕ್ಷಕರು ಘೋಷಿಸಿದ್ದಾರೆ.