ಕುಶಾಲನಗರ, ಜ. 14: ಪ್ರಬುದ್ಧ ನಾಗರಿಕರಾಗಲು ದೇಶದ ಪರಂಪರೆಯನ್ನು ಅರ್ಥೈಸಿಕೊಳ್ಳಬೇಕು ಎಂದು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಬೋಧ ಸ್ವರೂಪಾನಂದ ಸಲಹೆಯಿತ್ತರು.

ಅವರು ಕುಶಾಲನಗರದಲ್ಲಿ ಟುಲಿಪ್ ಟ್ರಸ್ಟ್, ವಿಕಾಸ ಜನಸೇವಾ ಟ್ರಸ್ಟ್ ಮತ್ತು ಜೀವನದಾರಿ ಟ್ರಸ್ಟ್ ಸಹಯೋಗದಲ್ಲಿ ನಡೆದ ವಿವೇಕಾನಂದರ 156ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವಿವೇಕಾನಂದರ ಆದರ್ಶಗಳು ಯುವಶಕ್ತಿಗೆ ಪ್ರತೀಕವಾಗಿವೆ. ಅವರ ತತ್ವ ಸಿದ್ದಾಂತಗಳ ಅಧ್ಯಯನ ಮೂಲಕ ಜೀವನಕ್ಕೆ ಉತ್ತಮ ಸಂದೇಶಗಳು ಲಭ್ಯವಾಗುವದು ಎಂದು ತಿಳಿಸಿದ ಸ್ವಾಮೀಜಿ, ಸರಕಾರಗಳು ಮಕ್ಕಳಲ್ಲಿ ಜೀವನ ಸಂದೇಶ ಬಿತ್ತರಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಮಾತನಾಡಿ, ಪ್ರತಿಯೊಬ್ಬರಲ್ಲಿ ಕ್ರಾಂತಿಕಾರಿ ಚಿಂತನೆ ಹೊರಬರಬೇಕಾಗಿದೆ. ದೈವತ್ವ, ಆಧ್ಯಾತ್ಮಿಕ ಧರ್ಮದ ಬಗ್ಗೆ ಅರಿವು ಪಡೆಯುವದು ಕಡ್ಡಾಯವಾಗಿದೆ. ಗುರುಹಿರಿಯರ ಆಶೀರ್ವಾದದ ಮೂಲಕ ಚೈತನ್ಯ ಹೊಂದಲು ಸಾಧ್ಯ ಎಂದರು. ಅತಿಥಿಗಳಾಗಿ ಪಾಲ್ಗೊಂಡ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಸಾಮಾಜಿಕ ಕಾರ್ಯಕರ್ತ ಎಸ್.ಮುರುಗೇಶ್ ಮಾತನಾಡಿದರು.

ಈ ಸಂದರ್ಭ ಅತಿಥಿಗಳಿಗೆ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ನಡೆದ ಚರ್ಚಾಸ್ಪರ್ಧೆ, ನಾಟಕ ಮತ್ತು ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಟ್ರಸ್ಟ್ ಅಧ್ಯಕ್ಷ ಚಂದನ್, ಕಾರ್ಯದರ್ಶಿ ಸಹನ, ಖಜಾಂಚಿ ಜಗ್ಗೇಶ್, ಟ್ರಸ್ಟಿ ನಿರಂಜನ್, ವಿಕಾಸ ಜನಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಇದ್ದರು.