ಕುಶಾಲನಗರ, ಜ. 14: ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಶಾಲನಗರ ಪಟ್ಟಣದ ಸರಕಾರಿ ಆಸ್ಪತ್ರೆ ರೋಗಿಗಳಿಗೆ ನರಕ ಸದೃಶ್ಯವಾಗಿ ಕಂಡುಬರುತ್ತಿದ್ದು ಈ ಬಗ್ಗೆ ಸಂಬಂಧಿಸಿದ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಪಟ್ಟಣದ ಸರಕಾರಿ ಆಸ್ಪತ್ರೆ ಆವರಣದಲ್ಲಿ ವಾಹನಗಳು ನಿಲುಗಡೆ ಅತಿಯಾಗಿದ್ದು ಕುಶಾಲನಗರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳು ಆಸ್ಪತ್ರೆಯ ಒಳಕ್ಕೆ ಹೊರಕ್ಕೆ ತೆರಳಲು ಪರದಾಡುವ ಸ್ಥಿತಿ ಸೃಷ್ಠಿಯಾಗಿದೆ.

ಕಳೆದ ಕೆಲವು ವರ್ಷಗಳಿಂದ ಆಸ್ಪತ್ರೆ ಕಟ್ಟಡದಲ್ಲಿ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುತ್ತಿದ್ದು ಆಸ್ಪತ್ರೆ ಆವರಣದಲ್ಲಿ ದಿನನಿತ್ಯದ ಒತ್ತಡ ಅಧಿಕವಾಗುವದರೊಂದಿಗೆ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತಾಗಿದೆ. ಕಳೆದ 4 ವರ್ಷಗಳಿಂದ ತಾಲೂಕು ವೈದ್ಯಾಧಿಕಾರಿಗಳ ಕಚೇರಿಗೆಂದು ನಿರ್ಮಾಣವಾಗಿರುವ ಕಟ್ಟಡವೊಂದು ಪೂರ್ಣಗೊಂಡಿದ್ದರೂ ಇದನ್ನು ಬಳಸಲು ವೈದ್ಯಾಧಿಕಾರಿಗಳು ಹಿಂದೇಟು ಹಾಕುತ್ತಿರುವದು ಎಲ್ಲಾ ಆವಾಂತರಗಳಿಗೆ ಕಾರಣವಾಗಿದೆ ಎಂಬ ಅಂಶ ಖಚಿತಗೊಂಡಿದೆ. ಸುಮಾರು ರೂ. 27 ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯ ಸಮೀಪ ನಿರ್ಮಾಣಗೊಂಡಿರುವ ಕಟ್ಟಡ ಪೂರ್ಣಗೊಂಡಿದ್ದರೂ ತಾಲೂಕು ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಲೋಕಾರ್ಪಣೆಗೊಳ್ಳದೆ ಪಾಳು ಬಿದ್ದಿರುವ ದೃಶ್ಯ ಕಂಡುಬಂದಿದೆ.

ಕಟ್ಟಡ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರ ಈ ಕಟ್ಟಡದ ಹಸ್ತಾಂತರಕ್ಕೆ ಹಲವು ಬಾರಿ ಮನವಿ ಮಾಡಿದರೂ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಯಾವದೇ ರೀತಿಯ ಸ್ಪಂದನೆ ದೊರಕುತ್ತಿಲ್ಲ ಎಂದು ಗುತ್ತಿಗೆದಾರ ಮಣಿ ‘ಶಕ್ತಿ’ಯೊಂದಿಗೆ ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ಜಿ.ಪಂ. ವತಿಯಿಂದ ನಿರ್ಮಾಣಗೊಂಡಿರುವ ಈ ಕಟ್ಟಡ ಇದೀಗ ಕಾಡುಪಾಲಾಗುತ್ತಿದ್ದು ಕಟ್ಟಡಕ್ಕೆ ಅಳವಡಿಸಿದ ವಿದ್ಯುತ್ ಮೀಟರ್ ಅನ್ನು ಕಳ್ಳರು ಅಪಹರಿಸಿ ರುವದಾಗಿ ಸ್ಥಳೀಯ ಪೊಲೀಸ್ ಠಾಣೆ ಯಲ್ಲಿ ದೂರು ಕೂಡ ದಾಖ ಲಾಗಿದೆ. ಇದ ರೊಂದಿಗೆ ಕಟ್ಟಡ ಬಾಪ್ತು ವಿದ್ಯುತ್ ಇಲಾಖೆಯಿಂದ ಕನಿಷ್ಟ ಬಿಲ್ ಬರುತ್ತಿದ್ದು ಇದನ್ನು ಗುತ್ತಿಗೆದಾರರೇ ಪಾವತಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ಕಟ್ಟಡದ ಸ್ವಚ್ಛತೆ ಕೂಡ ಗುತ್ತಿಗೆದಾರರಿಗೆ ಹೊರೆಯಾಗಿದ್ದು ಈ ಬಗ್ಗೆ ಆರೋಗ್ಯ ಇಲಾಖೆಯಾಗಲಿ ಸಂಬಂಧಿಸಿದ ಜಿ.ಪಂ. ಅಧಿಕಾರಿಗಳಾಗಲೀ ಮೌನವಹಿಸಿದ್ದು ಸಂಶಯಕ್ಕೆ ಎಡೆಮಾಡಿದೆ. ತನಗೆ ಬರಬೇಕಾದ ಕಾಮಗಾರಿ ಹಣ ಸಂದಾಯವಾಗಿದ್ದು ಇದರ ಉದ್ಘಾಟನೆ ವೆಚ್ಚ ಕೂಡ ತಾನೇ ಭರಿಸಬೇಕೆಂದು ತಾಲೂಕು ವೈದ್ಯಾಧಿಕಾರಿ ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಗುತ್ತಿಗೆದಾರ ಮಣಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸರಕಾರಿ ಆಸ್ಪತ್ರೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕು ವೈದ್ಯಾಧಿಕಾರಿ ಕಚೇರಿ ಸಿಬ್ಬಂದಿಗಳು ಕೂಡ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ದಿನದೂಡುತ್ತಿರುವದು ಕಾಣಬಹುದು.

ಸರಕಾರಿ ಯೋಜನೆಯೊಂದು ಪೂರ್ಣಗೊಂಡಿದ್ದರೂ ಲೋಕಾರ್ಪಣೆಯಾಗದೆ ಸೇವೆ ನೀಡುವ ಬದಲು ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿರುವದು ನಿಜಕ್ಕೂ ದುರಂತ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ನೂತನ ಕಟ್ಟಡದ ಲೋಕಾರ್ಪಣೆ ಮೂಲಕ ಕುಶಾಲನಗರದ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವತ್ತ ಚಿಂತನೆ ಹರಿಸಬೇಕಾಗಿದೆ.

- ಚಂದ್ರಮೋಹನ್