ಶನಿವಾರಸಂತೆ, ಜ. 14: ನಮ್ಮ ಶಾಲಾ ಕಟ್ಟಡ ಮೇಲ್ಛಾವಣಿ ಕುಸಿಯುವ ಹಂತ ತಲಪಿದೆ, ಆಟದ ಮೈದಾನದಲ್ಲಿ ಸಾರ್ವಜನಿಕರು ಜೂಜಾಡುತ್ತಾರೆ. ಮದ್ಯಪಾನ ಮಾಡಿ ಬಾಟಲಿ ಎಸೆದು ಹೋಗುತ್ತಾರೆ. ಶಾಲೆಗೆ ಬರುವ ರಸ್ತೆಯಲ್ಲಿ ಇರುವ ಕೆರೆಗೆ ಕಸ, ತ್ಯಾಜ್ಯ ಎಸೆದು ದುರ್ನಾತ ಬೀರುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.
ಇವೆಲ್ಲಾ ಸಮೀಪದ ಚಿಕ್ಕಕೊಳತ್ತೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದುಂಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಹೇಳಿಕೊಂಡ ಅಹವಾಲುಗಳು.
ಪಟ್ಟಣದ ವಿಘ್ನೇಶ್ವರ, ಕಾವೇರಿ, ಬಾಪೂಜಿ ವಿದ್ಯಾಸಂಸ್ಥೆಗಳು, ದುಂಡಳ್ಳಿ, ಬಿಳಾಹ, ಮಾದ್ರೆ, ದೊಡ್ಡಕೊಳತ್ತೂರು ಗ್ರಾಮಗಳ ಸರಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳು ಹತ್ತಾರು ಸಮಸ್ಯೆಗಳನ್ನು ಸಭೆಯ ಮುಂದಿಟ್ಟು ಜನಪ್ರತಿನಿಧಿಗಳನ್ನು ಪರಿಹರಿಸುವಂತೆ ಆಗ್ರಹಿಸಿದರು.
ಶಿಕ್ಷಕರಾದ ಕೆ.ಪಿ. ಜಯಕುಮಾರ್, ಸಿ.ಆರ್.ಪಿ. ಜವರಯ್ಯ, ಪಿ.ಡಿ.ಓ. ಸುಮಂತ್ ಮಾತನಾಡಿ, ಮಕ್ಕಳ ಹಕ್ಕುಗಳ ಮತ್ತು ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ರಕ್ಷಿತ್, ಪಾರ್ವತಮ್ಮ, ನೇತ್ರಾವತಿ, ಬಿಂದಮ್ಮ, ಕಮಲಮ್ಮ, ಕಾರ್ಯದರ್ಶಿ ವೇಣುಗೋಪಾಲ್, ಸೆಸ್ಕ್ ಅಭಿಯಂತರ ಹೇಮಂತ್, ಪೊಲೀಸ್ ಸಿಬ್ಬಂದಿ ಶಶಿಕಲಾ, ಸಿ.ಆರ್.ಪಿ. ರಾಂಕುಮಾರ್, ಮುಖ್ಯ ಶಿಕ್ಷಕ ಚಂದ್ರಶೇಖರ್, ಸಹಶಿಕ್ಷಕರು ಉಪಸ್ಥಿತರಿದ್ದರು.