ಮಡಿಕೇರಿ, ಜ. 13: ಸ್ವಚ್ಛ ರಾಷ್ಟ್ರ.., ಸುಭದ್ರ ರಾಷ್ಟ್ರ.., ಎಂಬ ಪರಿಕಲ್ಪನೆಯೊಂದಿಗೆ ದೇಶದೆಲ್ಲೆಡೆ ಸ್ವಚ್ಛತಾ ಅಭಿಯಾನ, ಶ್ರಮದಾನ ಕಾರ್ಯಕ್ರಮಗಳು ಇದೀಗ ಎಲ್ಲೆಡೆ ನಡೆಯುತ್ತಿವೆ. ಈ ಸ್ವಚ್ಛತೆಯ ಅಭಿಯಾನದಲ್ಲಿ ಬಹುತೇಕ ಎಲ್ಲರೂ ಕೈಜೋಡಿಸುತ್ತಿದ್ದಾರೆ. ಆದರೂ ಕೆಲವಾರು ಕಡೆ ಗಳಲ್ಲಿ ಸ್ವಚ್ಛತೆಯ ಮಹತ್ವಕ್ಕೆ ಬೆಲೆಯೇ ಸಿಗದಿರು ವದನ್ನೂ ಕಾಣಬಹು ದಾಗಿದೆ. ಕೆಲವಾರು ಮಂದಿ ಈ ನಿಟ್ಟಿನಲ್ಲಿ ಪೂರ್ಣ ಪ್ರಮಾಣ ದಲ್ಲಿ ಸುದುದ್ದೇಶ ದಿಂದ ಕೆಲಸ ನಿರ್ವಹಿಸುತ್ತಿದ್ದರೆ, ಕೆಲವೆಡೆ ಇದು ಮಾಧ್ಯಮಗಳಿಗೆ ‘ಫೋಜ್’ ನೀಡುವ ಸ್ಥಿತಿಯನ್ನೂ ಜನತೆ ಕಾಣುತ್ತಿದ್ದಾರೆ.

ಈ ನಡುವೆ ಕೊಡಗು ಮೂಲದ ಕೆಲವು ಯುವಕ - ಯುವತಿಯರು ಅದರಲ್ಲೂ ಐಟಿ - ಬಿಟಿಯಂತಹ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಾ ಕೈತುಂಬಾ ಸಂಬಳ ಪಡೆಯುತ್ತಿರುವವರಾದರೂ ಪ್ರಕೃತಿದತ್ತವಾದ ಕೊಡಗು ಜಿಲ್ಲೆಯಲ್ಲಿ ಉತ್ತಮ ಸ್ಥಿತಿಯಲ್ಲಿ ನಾಳೆಗೂ ಉಳಿಸಿಕೊಳ್ಳಬೇಕು ಎಂಬ ಕನಸ್ಸಿನೊಂದಿಗೆ ಕ್ರಿಯಾಶೀಲ ಪ್ರಯತ್ನವನ್ನು ಸದ್ದಿಲ್ಲದೆ ನಡೆಸುತ್ತಿದ್ದಾರೆ. ಅದರಲ್ಲೂ ಕಳೆದ ಮಳೆಗಾಲದ ಬಳಿಕ ಉಂಟಾದ ಪರಿಸ್ಥಿತಿಯ ಬಳಿಕ ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡುವ ಪ್ರಯತ್ನ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಕೋನದಿಂದ ಈ ಯುವಕ - ಯುವತಿಯರು ಸೇರಿ ‘ಕೊಡಗು ಫಾರ್ ಟುಮಾರೊ’ ಎಂಬ ಸಂಸ್ಥೆಯನ್ನು ರಚಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಹೈದರಾಬಾದ್, ದುಬೈ, ಪ್ಯಾರಿಸ್ ನಂತಹ ಕಡೆಗಳಲ್ಲಿ ಉದ್ಯೋಗ ದಲ್ಲಿರುವ ಈ ಸ್ನೇಹಿತರ ತಂಡ ವ್ಯಾಟ್ಸಾಪ್, ಫೇಸ್‍ಬುಕ್ ನಂತಹ ಸಾಮಾಜಿಕ ಜಾಲ ತಾಣದ ಮೂಲಕ ಪರಸ್ಪರ ಸಂಪರ್ಕವಿರಿಸಿ Éೂಂಡು, ಸಾಧ್ಯವಾದವರು ತಮ್ಮ ವಾರಾಂತ್ಯದ ರಜಾ ದಿನಗಳನ್ನು ಮೋಜು - ಮಸ್ತಿಯಿಂದ ಕಳೆಯದೆ ತವರು ಜಿಲ್ಲೆ ಕೊಡಗಿಗೆ ಆಗಮಿಸಿ ಅಲ್ಲಲ್ಲಿ ಸ್ವತಃ ಟೊಂಕ ಕಟ್ಟಿ ಕೆಲಸಕ್ಕಿಳಿದು ಕಸ ನಿರ್ವಹಣೆ ಮಾಡುತ್ತಿದ್ದಾರೆ.

ಅಲ್ಲಲ್ಲಿ ಸಂಗ್ರಹವಾಗುವ ಭಾರೀ ಪ್ರಮಾಣದ ಬಾಟಲಿಗಳು, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಹೊರ ಜಿಲ್ಲೆಯಲ್ಲಿರುವ ‘ರೀ ಸೈಕಲಿಂಗ್ ಫ್ಲಾಂಟ್’ಗಳ ಸಹಕಾರ ಪಡೆದು ಅಲ್ಲಿಗೆ ಸಾಗುತ್ತಿದ್ದಾರೆ. ಇದಕ್ಕೆ ತಗಲುವ ಎಲ್ಲಾ ವೆಚ್ಚಗಳನ್ನೂ ತಾವುಗಳೇ ಭರಿಸುವದರೊಂದಿಗೆ ಇತರರಿಗೂ ಮಾದರಿಯಾಗುತ್ತಿದ್ದಾರೆ. ಈ ತಂಡದ ಪ್ರಯತ್ನಕ್ಕೆ ಕ್ರೀಡಾ ತಾರೆಗಳು, ಸೆಲೆಬ್ರ್ರಿಟಿಗಳು ತಮ್ಮಿಂದಾದ ಉತ್ತೇಜನ, ಸಹಕಾರವನ್ನು ನೀಡುತ್ತಿರುವದು ವಿಶೇಷ. ಈಗಾಗಲೇ ರೋಹನ್ ಬೋಪಣ್ಣ, ರಾಬಿನ್ ಉತ್ತಪ್ಪ, ವಿಜಯ್ ರಾಘವೇಂದ್ರ, ಶೃತಿ ಪ್ರಕಾಶ್, ಅನುಪಮಾ ಗೌಡ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಚೇನಂಡ ಕುಟ್ಟಪ್ಪ ಅವರಂತಹವರು ಪ್ರೋತ್ಸಾಹ ನೀಡಿದ್ದಾರೆ. ಇದರೊಂದಿಗೆ ಜಿಲ್ಲೆಯ ಬೆಳೆಗಾರರು, ಆಡಳಿತ ಪ್ರಮುಖರು, ವಿದ್ಯಾರ್ಥಿಗಳೂ ಸಹಕಾರ ನೀಡುತ್ತಿದ್ದಾರೆ. ಸ್ವಚ್ಛತಾ ಕಾರ್ಯನಿರ್ವಹಣೆಯೊಂದಿಗೆ ಪ್ರಾಕೃತಿಕ ದುರಂತದಲ್ಲಿ ಸಂತ್ರಸ್ತರಾದ ಹಲವರಿಗೂ ಈ ಯುವ ಪಡೆ ನೆರವಿನ ಹಸ್ತ ನೀಡಿದೆ.

ಈ ತನಕ

ಕೊಡಗು ಫಾರ್ ಟುಮಾರೋ ತಂಡ ಈ ತನಕ ಮಡಿಕೇರಿಯ ಸುತ್ತಮುತ್ತ ಮಕ್ಕಂದೂರು, ಮಾದಾಪುರ, ಹರದೂರು ಸೇತುವೆ, ಕಕ್ಕಬೆ ಸೇತುವೆ, ಕಾಲೂರು, ಬೇಗೂರು, ಮೊಣ್ಣಂಗೇರಿ ಇಂತಹ ಕಡೆಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದೆ. ಈ ತಂಡವನ್ನು ಟ್ರಸ್ಟ್ ಆಗಿ ಮಾಡಿ ನೋಂದಣಿ ಮಾಡಿಕೊಂಡು ಕರಾರುವಕ್ ಆಗಿ ಕೆಲಸ ನಿರ್ವಹಿಸುವ ಚಿಂತನೆ ಮಾಡಿರುವ ಇವರು ಜಿಲ್ಲೆಯ ಎಲ್ಲೆಡೆ ಇಂತಹ ಶ್ರಮದಾನಕ್ಕೆ ಚಿಂತನೆ ಹರಿಸಿದ್ದಾರೆ. ವಿಶೇಷವೆಂದರೆ ಎಲ್ಲೂ ಯಾರ ಹೆಸರನ್ನೂ ಇವರುಗಳು ಪ್ರಚಾರ ಮಾಡುತ್ತಿಲ್ಲ.

ಒಂದೆಡೆ ಈ ಅಭಿಯಾನದ ಮೂಲಕ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸಾಗಿಸಿದರೂ ಮತ್ತೆ ಮತ್ತೆ ಇದೇ ಸ್ಥಳಗಳಲ್ಲಿ ಕೆಲವರು ಕಸಗಳನ್ನು ಹಾಕುತ್ತಿರುವದು ವಿಷಾದಕರ ಎಂದು ತಂಡದ ಹಲವರು ಹೇಳುತ್ತಾರೆ. - ಶಶಿ