ಮಡಿಕೇರಿ, ಜ. 13: ಒಂದೆಡೆ ಪ್ರವಾಸಿಗರ ಸಂಭ್ರಮ..,ಮತ್ತೊಂದೆಡೆ ಸ್ಥಳೀಯರ ಹರ್ಷೊಲ್ಲಾಸ..,ಎತ್ತ ನೋಡಿದರೂ ಜನಜಂಗುಳಿ...ಈ ಚಿತ್ರಣ ಪ್ರವಾಸಿ ಉತ್ಸವದ ಕೊನೆಯ ದಿನ ನಡೆದ ಓಪನ್ ಸ್ಟ್ರೀಟ್ ಫೆಸ್ಟಿವಲ್‍ನಲ್ಲಿ ಕಂಡು ಬಂತು.ಇದೇ ಮೊದಲ ಬಾರಿಗೆ ನಡೆದ ಈ ಅಪರೂಪದ ಕಾರ್ಯಕ್ರಮದಲ್ಲಿ ಪ್ರವಾಸಿಗರು ಮಾತ್ರವಲ್ಲದೇ ಸ್ಥಳೀಯರು ಕೂಡ ಮುಕ್ತವಾಗಿ ಬೆರೆತು ಸಂಭ್ರಮಿಸಿದರು.ಸ್ಟ್ರೀಟ್ ಫೆಸ್ಟಿವಲ್ ಪ್ರಯುಕ್ತ ರಾಜಾಸೀಟು ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಮಂಗೇರಿರ ಮುತ್ತಣ್ಣ ವೃತ್ತದ ಬಳಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ವಾಹನಗಳು ಒಳ ಬರದಂತೆ ಕ್ರಮವಹಿಸಲಾಗಿತ್ತು.ಅತ್ತ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಬಳಿಯು ವಾಹನಗಳು ಒಳ ಪ್ರವೇಶಿಸದಂತೆ ಬ್ಯಾರಿಕೇಡ್‍ಗಳನ್ನಿಟ್ಟು ಪೊಲೀಸರನ್ನು ನಿಯೋಜಿಸಲಾಗಿತ್ತು.

ವಾಹನಗಳ ಸಂಚಾರ ನಿಷೇಧಿಸಿದ್ದ ಕಾರಣ ರಾಜಾಸೀಟು ರಸ್ತೆಯಲ್ಲಿ ಪ್ರವಾಸಿಗರ ಹಾಗೂ ಸ್ಥಳೀಯರ ಓಡಾಟ ಹೆಚ್ಚಾಗಿತ್ತು. ರಸ್ತೆಯುದ್ದಕ್ಕೂ ವಿವಿಧ ಸಂಘ ಸಂಸ್ಥೆಗಳ; ಖಾಸಗಿ ವ್ಯಾಪಾರಿಗಳ ಮಳಿಗೆಗಳನ್ನು ತೆರೆಯಲಾಗಿತ್ತು.ಕೆಲವು ಮಳಿಗೆಗಳಲ್ಲಿ ಪರಿಸರ ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತಿತ್ತು. ಇನ್ನುಳಿದಂತೆ ಕೊಡಗಿನ ಕಾಫಿ, ರುಚಿ ರುಚಿಯಾದ ತಿನಿಸು, ಗೃಹ ಅಲಂಕಾರಿಕ ವಸ್ತುಗಳು, ಯುವಕ ಯುವತಿಯರ ಅಲಂಕಾರಿಕ ಸಾಮಗ್ರಿಗಳು, ಮಕ್ಕಳ ಆಟಿಕೆಗಳ ಮಳಿಗೆಗಳಿದ್ದವು.

ಮಡಿಕೇರಿಯ ಪೊಲೀಸ್ ಪೇದೆ ಮಂಜುನಾಥ್ ಸೇರಿದಂತೆ ಹಲವು ಕಲಾವಿದರು ತಾವು ರಚಿಸಿದ ಚಿತ್ರಗಳ ಪ್ರದರ್ಶನ ಮಳಿಗೆಗಳನ್ನು ತೆರೆದಿದ್ದರು ಮಾತ್ರವಲ್ಲದೆ ಸ್ಥಳದಲ್ಲಿಯೆ ಚಿತ್ರ ರಚನೆಯಲ್ಲಿ ತೊಡಗಿಕೊಂಡಿದ್ದರು. ರಸ್ತೆಯ ಅಲ್ಲಲ್ಲಿ ಬಣ್ಣಗಳಿಂದ ಆನೆ, ಗೊಂಬೆ, ನಕ್ಷತ್ರ, ಚಿಟ್ಟೆ, ಹೂವುಗಳನ್ನು ಆಕರ್ಷಕವಾಗಿ ಬಿಡಿಸಲಾಗಿತ್ತು. ಕರ್ನಾಟಕದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಕಲಾಕೃತಿಗಳನ್ನು ಇಡ ಲಾಗಿತ್ತು. ಇದರೊಂದಿಗೆ ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಕಲಾಕೃತಿಗಳೂ ಕಂಗೊಳಿಸಿದವು.

ಮರದ ಕಾಲನ್ನು ತೊಟ್ಟ ಯುವಕರು, ತಲೆ ಇಲ್ಲದ ಮನುಷ್ಯನ ವೇಷ ಹಾಕಿದ್ದ ವ್ಯಕ್ತಿ, ಗೊಂಬೆ ವೇಷಧಾರಿಗಳು

(ಮೊದಲ ಪುಟದಿಂದ) ರಾಜಾಸೀಟು ಮಾರ್ಗದಲ್ಲಿ ಸಂಚರಿಸುತ್ತಾ ನೆರೆದಿದ್ದವರನ್ನು ರಂಜಿಸಿದರು. ಇವರುಗಳೊಂದಿಗೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಜನತೆ ಸಂಭ್ರಮಿಸುತಿದ್ದುದು ಕಂಡುಬಂತು. ರಾಜಾಸೀಟು ಬಳಿಯಲ್ಲಿ ರಸ್ತೆ ಮಧ್ಯೆಯೆ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಬೆಳಗ್ಗಿನಿಂದಲೇ ಯೋಗ ಸೇರಿದಂತೆ ವಿವಿಧ ತಂಡಗಳಿಂದ ಜಂಬೊ ನೃತ್ಯ, ಡೊಳ್ಳು ಕುಣಿತ, ಮ್ಯಾಜಿಕ್ ಶೋ, ವಾಲಗ ನೃತ್ಯ ಸೇರಿದಂತೆ ಹಲವಾರು ಮನರಂಜನೀಯ ಕಾರ್ಯಕ್ರಮಗಳು ಸಂಜೆಯವರೆಗೂ ನಡೆದವು. ಸ್ಟ್ರೀಟ್ ಫೆಸ್ಟಿವಲ್ ಗೆ ಜಿಲ್ಲಾಧಿಕಾರಿ (ಪ್ರಬಾರ) ಲಕ್ಷ್ಮಿಪ್ರಿಯ ಅವರು ಬಲೂನುಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ರಾತ್ರಿ ಗಾಂಧಿ ಮೈದಾನದ ವೇದಿಕೆಯಲ್ಲಿ ಅರೆಭಾಷೆ ಅಕಾಡೆಮಿ ಕಾರ್ಯಕ್ರಮ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಸಂಗೀತ ರಸಮಂಜರಿ ನಡೆಯಿತು.