13 ನಿರ್ದೇಶಕರ ಆಯ್ಕೆ
ಗೋಣಿಕೊಪ್ಪ ವರದಿ, ಜ. 13 : ಮಾಹಿತಿ ಕೊರತೆ, ಗೊಂದಲ ಆರೋಪಗಳ ನಡುವೆ ನಡೆದ ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 980 ಸದಸ್ಯರು ಮತದಾನ ಮಾಡುವ ಮೂಲಕ 13 ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.
ಸಾಲಗಾರ ಹಾಗೂ ಸಾಲಗಾರರಲ್ಲದ ಕ್ಷೇತ್ರದ ಒಟ್ಟು 13 ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಒಟ್ಟು 1436 ಮತದಾರರಲ್ಲಿ 980 ಮತದಾರರು ಮತ ಚಲಾಯಿಸಿದರು. ರಾತ್ರಿ ಸುಮಾರು 7.30 ಗಂಟೆಗೆ ಫಲಿತಾಂಶ ಹೊರಬಿತ್ತು. ಸಾಯಂಕಾಲ 4 ಗಂಟೆವರೆಗೆ ನಡೆದ ಮತದಾನದಲ್ಲಿ ಸಾಲಗಾರರ ಕ್ಷೇತ್ರದಿಂದ 702, ಸಾಲಗಾರಲ್ಲದ ಕ್ಷೇತ್ರದಿಂದ 278 ಸದಸ್ಯರು ಮತದಾನ ಮಾಡಿದರು. ಉಳಿದ 456 ಸದಸ್ಯರು ಮತದಾನಕ್ಕೆ ಬಾರದೆ ದೂರ ಉಳಿಯುವಂತಾಯಿತು.
13 ನಿರ್ದೇಶಕರ ಆಯ್ಕೆ : ಸಾಲಗಾರ ಹಾಗೂ ಸಾಲಗಾರರಲ್ಲದ ಕ್ಷೇತ್ರದ ಒಟ್ಟು 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರಕ್ಕೆ ಕೇಚಮಾಡ ನಿರ್ಮಲಾ ದಿನೇಶ್, ಮನ್ನಕ್ಕಮನೆ ಅಶ್ವಿನಿ ನಂದಾ, ಪರಿಶಿಷ್ಠ ಪಂಗಡದಿಂದ ಎಂ. ಎಂ. ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾದರು.
ಎರಡು ಕ್ಷೇತ್ರದ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ ಅಳಮೇಂಗಡ ವಿವೇಕ್ (377 ಮತಗಳು), ಕಾಡ್ಯಮಾಡ ಭರತ್ (314), ಕಾಡ್ಯಮಾಡ ಬೋಪಣ್ಣ (379), ಕುಂಞÂಮಾಡ ಹರೀಶ್ (474) ಚಿರಿಯಪಂಡ ಬೆಳ್ಯಪ್ಪ (297), ಕೆ. ಆರ್. ಸುರೇಶ್ (292), ಬಿಸಿಎಂ(ಎ) ಮೀಸಲು ಕ್ಷೇತ್ರದಿಂದ ಮನ್ನಕಮನೆ ಕೆ. ಪ್ರಕಾಶ್ (464), ಮನ್ನಕಮನೆ ರವಿ (350), ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರದಿಂದ ಕೆ. ಬೊಗರು (338), ಸಾಲಗಾರಲ್ಲದ ಕ್ಷೇತ್ರದಿಂದ ಪೋರಂಗಡ ಲೀನಾ ಬೋಪಣ್ಣ (163), ಚುನಾಯಿತರಾದರು.
ಗೊಂದಲದ ನಡುವೆ ಮುಗಿದ ಚುನಾವಣೆ : ಸಹಕಾರ ಸಂಘದಲ್ಲಿ ಆರ್ಥಿಕ ವ್ಯವಹಾರ ಮಾಡದ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ನಿಯಮದಿಂದಾಗಿ ಎಲ್ಲಾ ಸದಸ್ಯರಿಗೆ ಮತದಾನಕ್ಕೆ ಅವಕಾಶವಿಲ್ಲ ಎಂಬ ಗೊಂದಲವಿತ್ತು.
ಒಟ್ಟು 1436 ಮತದಾರರಲ್ಲಿ 407 ಸದಸ್ಯರಿಗೆ ಮಾತ್ರ ಮತದಾನದ ಹಕ್ಕಿದೆ. ಉಳಿದ ಸದಸ್ಯರು ಸಂಘದಲ್ಲಿ ಸಂಘದ ಬೈಲಾ ಪ್ರಕಾರ ಆರ್ಥಿಕ ವ್ಯವಹಾರ ನಡೆಸದ ಕಾರಣ ಮತದಾನದ ಹಕ್ಕು ಕಳೆದುಕೊಂಡಿದ್ದರು. ಹೈಕೋರ್ಟ್ ಎಲ್ಲಾರಿಗೂ ಮತದಾನದ ಹಕ್ಕಿದೆ ಎಂದು ತೀರ್ಪು ನೀಡಿದ್ದರಿಂದ ಗೊಂದಲದಲ್ಲಿ ಚುನಾವಣೆ ನಡೆಯಿತು. ಹೆಚ್ಚುವರಿಯಾಗಿ 1029 ಸದಸ್ಯರಿಗೆ ಮತದಾನ ಮಾಡುವ ಹಕ್ಕು ದೊರೆಯಿತು.
ಕೇವಲ 407 ಸದಸ್ಯರಿಗೆ ಮಾತ್ರ ಚುನಾವಣಾಧಿಕಾರಿ ಬ್ಯಾಲೆಟ್ ಪೇಪರ್ ಮುದ್ರಿಸಿದ್ದರು. ನಂತರ ಶುಕ್ರವಾರ ತರಾತುರಿಯಲ್ಲಿ ಮತ್ತೆ ಹೆಚ್ಚುವರಿ ಬ್ಯಾಲೆಟ್ ಪೇಪರ್ ಮುದ್ರಿಸಿ, ಚುನಾವಣೆ ಸಿಬ್ಬಂದಿ ಆಯ್ಕೆ ಕೂಡ ತರಾತುರಿಯಲ್ಲಿ ನಡೆಸಿ ಚುನಾವಣೆ ನಡೆಸಲಾಯಿತು. -ಸುದ್ದಿಪುತ್ರ