ಮಡಿಕೇರಿ, ಜ. 13: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ನೆಲಜಿ ಬಳಿ ರೇವು ಪಾರ್ಟಿ ನಡೆಸುತ್ತಿದ್ದ ಆರೋಪ ಮೇರೆಗೆ, ಪೊಲೀಸರು ಜಾಗ ಮಾಲೀಕ ಸಹಿತ ಐವರನ್ನು ಸೆರೆ ಹಿಡಿದಿರುವದಾಗಿ ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. ಆರೋಪಿಗಳಿಂದ ಕೊಕೈನ್ ಇತ್ಯಾದಿ ಮಾದಕ ಪದಾರ್ಥಗಳ ಸಹಿತ ರೇವು ಪಾರ್ಟಿಯಲ್ಲಿ ತೊಡಗಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಮುಂಬೈ ಹಾಗೂ ಕೇರಳ ಮೂಲದ ಮಂದಿ ಸಹಿತ ಪಾರ್ಟಿಗೆ ಸ್ಥಳಾವಕಾಶ ಕಲ್ಪಿಸಿರುವ ವ್ಯಕ್ತಿಯ ವಿಚಾರಣೆ ನಡೆಸುತ್ತಿರುವರೆಂದು ತಿಳಿದು ಬಂದಿದೆ. ಆರೋಪಿಗಳಿಂದ ರೂ. 1.75 ಲಕ್ಷ ಅಂದಾಜು ನಗದು ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾಗಿ ಗೊತ್ತಾಗಿದೆ. ಈ ಸಂಬಂಧ ವಿಚಾರಣೆ ಮುಂದುವರಿದಿದೆ.