ಸೋಮವಾರಪೇಟೆ, ಜ. 13: ತಾಲೂಕಿನ ಪುಷ್ಪಗಿರಿ ಅರಣ್ಯ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಕೂತಿ, ನಗರಳ್ಳಿ, ಮಾಗೇರಿ, ಕುಂದಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಗ್ರಾಮಸ್ಥರು ಮತ್ತು ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟಿದರು.ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಕೃಷಿ ಫಸಲುಗಳನ್ನು ನಷ್ಟಗೊಳಿಸುತ್ತಿವೆ. ನಿರಂತರವಾಗಿ ಕಾಡಾನೆಗಳು ಧಾಳಿ ನಡೆಸುತ್ತಿದ್ದು, ಹಲವು ಗ್ರಾಮಸ್ಥರ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳನ್ನು ನಾಶ ಮಾಡುತ್ತಿವೆ. ಮರಿಯಾನೆಯೊಂದಿಗೆ ಸುಮಾರು ಹತ್ತಕ್ಕೂ ಅಧಿಕ ಆನೆಗಳು ಈ ಭಾಗದಲ್ಲಿ ಬೀಡುಬಿಟ್ಟಿದ್ದು, ಗ್ರಾಮಸ್ಥರು ತೋಟ,ಗದ್ದೆಗಳಿಗೆ ತೆರಳಲು ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನ ಸೆಳೆದಿದ್ದರು.

ಈ ಹಿನ್ನೆಲೆ ಅರಣ್ಯ ಇಲಾಖಾಧಿಕಾರಿಗಳು ಮತ್ತು ಗ್ರಾಮಸ್ಥರು ಜಂಟಿ ಕಾರ್ಯಾಚರಣೆ ನಡೆಸಿ, ಜನವಸತಿ ಪ್ರದೇಶದಲ್ಲಿ ಬಿಡುಬಿಟ್ಟಿದ್ದ ಆನೆಗಳನ್ನು ಅರಣ್ಯಕ್ಕೆ ಅಟ್ಟಲಾಯಿತು. ಈ ಸಂದರ್ಭ ಮಾತನಾಡಿದ ಗ್ರಾಮಸ್ಥರಾದ ಧರ್ಮಪಾಲ್, ಈ ಭಾಗದ ಜನತೆ ಈಗಾಗಲೇ ಅತಿವೃಷ್ಟಿಯಿಂದ ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ.

(ಮೊದಲ ಪುಟದಿಂದ) ಇದರೊಂದಿಗೆ ಕಾಡಾನೆಗಳ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ಕಾಫಿ ತೋಟದ ಫಸಲುಗಳು ಹಾಳಾಗುತ್ತಿವೆ ಮತ್ತು ಭತ್ತದ ಗದ್ದೆಗಳನ್ನು ತುಳಿದು ಹಾಳು ಮಾಡುತ್ತಿದೆ. ಹಲವಷ್ಟು ಬಾರಿ ಅರಣ್ಯಕ್ಕೆ ಅಟ್ಟಿದರೂ ಮತ್ತೆ ವಾಪಸ್ ಬರುತ್ತಿವೆ ಎಂದರು. ಕಾಡಾನೆಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಕೇವಲ ಎರಡರಿಂದ ಮೂರು ಜನ ಸಿಬ್ಬಂದಿಯನ್ನು ಮಾತ್ರ ಕಳಿಸುತ್ತಾರೆ. ಕಾಡಾನೆಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಇಲಾಖೆಯ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು. ಗ್ರಾಮಸ್ಥರಾದ ಸೋಮಶೇಖರ್, ಸಜನ್, ಕೀರ್ತಿ, ಪ್ರಕಾಶ್, ರೋಹಿತ್ ಸೇರಿದಂತೆ ನಗರಳ್ಳಿ ಮತ್ತು ಕೂತಿ ಗ್ರಾಮಸ್ಥರು, ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.